ಬೆಂಗಳೂರು, ಫೆ 20 (DaijiworldNews/HR): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 'ತನುಜಾ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತನುಜಾ ಎಂಬ ಹುಡುಗಿ ಕೋವಿಡ್ನಿಂದಾಗಿ ನೀಟ್ ಪರೀಕ್ಷೆ ಬರೆಯಲು ಅಸಹಾಯಕತೆ ವ್ಯಕ್ತಪಡಿಸಿ ನಂತರ ಇಬ್ಬರು ಪತ್ರಕರ್ತರ ಸಹಾಯದಿಂದ ಪರೀಕ್ಷೆ ಬರೆದಿದ್ದಳು. ಈ ಬಾಲಕಿ ನೀಟ್ ಪಾಸಾಗಿದ್ದು, ಈ ಘಟನೆ ದೇಶದ ಗಮನ ಸೆಳೆದಿತ್ತು.
ಪರೀಕ್ಷೆ ಬರೆಯಲು ಸುಮಾರು 350 ಕಿಮೀ ದೂರ ಪ್ರಯಾಣ ಮಾಡಿ ಬಂದು ಪರೀಕ್ಷೆ ಬರೆದಿದ್ದೇ ರೋಚಕತೆಯಿಂದ ಕೂಡಿದ್ದು ಎಲ್ಲರ ಕುತೂಹಲ ಕೆರಳಿಸಿತು. ಈ ಕಥೆಯನ್ನೇ ಆಧರಿಸಿ ಹರೀಶ್ ಎಂ.ಡಿ ಹಳ್ಳಿಯವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ
'ತನುಜಾ' ಸಿನಿಮಾದ ಮೊದಲ ಭಾಗದ ಚಿತ್ರೀಕರಣ ನಡೆದಿದ್ದು, ಸಿನಿಮಾದಲ್ಲಿ ಮಾಜಿ ಸಿಎಂ ಯಾವ ರೀತಿಯಾಗಿ ನಟನೆ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ.
ಇನ್ನು ಬಿಯಾಂಡ್ ವಿಷನ್ಸ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ತನುಜಾ' ಸಿನಿಮಾ ನಿರ್ಮಾಣವಾಗುತ್ತಿದ್ದು, ಶಿವಮೊಗ್ಗ ಮತ್ತು ಬೆಂಗಳೂರಿನ ಹಲವು ಕಡೆ ಚಿತ್ರೀಕರಣ ನಡೆದಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಪ್ತ ಪಾವೂರು ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ತಾರಾಗಣದಲ್ಲಿ ಯಡಿಯೂರಪ್ಪ, ವಿಶ್ವೇಶಯ್ಯ ಭಟ್, ಡಾ ಕೆ ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ ಮತ್ತು ಬೇಬಿ ಶ್ರೀ ಅಭಿನಯಿಸುತ್ತಿದ್ದು, ಪ್ರದ್ಯೋತನ ಸಂಗೀತ ನೀಡಿದ್ದಾರೆ. ರವೀಂದ್ರನಾಥ್ ಅವರ ಛಾಯಾಗ್ರಹಣವಿದ್ದು, ಉಮೇಶ್ ಆರ್ ಬಿ ಚಿತ್ರದ ಸಂಕಲನವಿದೆ. ಆರ್ ಚಂದ್ರಶೇಖರ್ ಪ್ರಸಾದ್ ಮತ್ತು ಜೆ ಎಂ ಪ್ರಹ್ಲಾದ್ ಸಂಭಾಷಣೆ ಬರೆದಿದ್ದಾರೆ.