ಮಂಗಳೂರು, ಫೆ 06 (DaijiworldNews/KP): ಲಾಕ್ಡೌನ್ ಹಾಗೂ ಕೋವಿಡ್ ಸಾಂಕ್ರಮಿಕ ಕಾಲಘಟ್ಟದಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ತುಳು ಚಲನಚಿತ್ರ 'ಸೋಡಾ ಶರ್ಬತ್' ಫೆಬ್ರವರಿ 20 ರಂದು ಯುಎಇಯಲ್ಲಿ ಬಿಡುಗಡೆಯಾಗಲಿದೆ.
ಪಿಬಿಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣದವಾದ "ಸೋಡಾ ಶರ್ಬತ್ " ಲಾಕ್ ಡೌನ್ , ಮೂರನೇ ಅಲೆಯ ಭೀತಿಯ ನಡುವೆಯೂ ಪ್ರೇಕ್ಷಕರನ್ನು ಸೆಳೆಯುತ್ತಿರುವ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗಾ ಯುಎಇಯಲ್ಲಿ ಫೆಬ್ರವರಿ 20ರಂದು ಬೆಳಿಗ್ಗೆ 10 ಗಂಟೆಗೆ ಮತ್ತು ಸಂಜೆ 4 ಗಂಟೆಗೆ ಹಯಾತ್ ರೀಜೆನ್ಸಿ ದೇರಾದ ಗ್ಯಾಲೇರಿಯಾ ಮಾಲ್ನಲ್ಲಿರುವ ಸ್ಟಾರ್ ಗ್ಯಾಲೇರಿಯಾ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ಏರ್ಪಡಿಸಿದ್ದಾರೆ ಮತ್ತು ಅದೇ ದಿನ ಅಬುಧಾಬಿಯ ಅಲ್ ವಾಹ್ದಾ ಮಾಲ್ನಲ್ಲಿರುವ ಆಸ್ಕರ್ ಚಿತ್ರಮಂದಿರದಲ್ಲಿ ಸಂಜೆ 4 ಗಂಟೆಗೆ ಮತ್ತೊಂದು ಪ್ರದರ್ಶನಕ್ಕೆ ಏರ್ಪಡು ಮಾಡಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.
ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಭಾರತದಲ್ಲಿ ಬಿಡುಗಡೆಯಾದ ಚಿತ್ರವು ಭಾರೀ ಯಶಸ್ಸನ್ನು ಕಂಡಿತು ಮತ್ತು ಪ್ರೇಕ್ಷಕರನ್ನು ಆಕರ್ಷಿಸಿತು, ಅಲ್ಲದೆ ಥಿಯೇಟರ್ಗಳಲ್ಲಿ 25 ದಿನಗಳನ್ನು ಪೂರೈಸಿದ ಮೊದಲ ಚಲನಚಿತ್ರ ಇದಾಗಿದ್ದು, ಚಿತ್ರದ ಹಲವು ಕಲಾವಿದರು ಯುಎಇಯಲ್ಲಿ ನೆಲೆಸಿದ್ದಾರೆ. ಹಾಗಾಗಿ ಭಾರತದಲ್ಲಿ ಬಿಡುಗಡೆಯಾದ ಆರಂಭಿಕ ದಿನಗಳಲ್ಲಿ ಅದರ ಯುಎಇ ಪ್ರೀಮಿಯರ್ಗೆ ಭಾರಿ ಬೇಡಿಕೆ ಇತ್ತು. ಆದರೆ ಕೋವಿಡ್ ನಿರ್ಬಂಧಗಳ ಕಾರಣ, ನಿರ್ಮಾಪಕರು ಯುಎಇಯಲ್ಲಿ ಅದೇ ಸಮಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈಗ ಯುಎಇಯ ಥಿಯೇಟರ್ಗಳಲ್ಲಿ ನಿರ್ಬಂಧವನ್ನು ತೆಗೆದು ಹಾಕಿರುವ ಕಾರಣ ಚಿತ್ರ ಬಿಡುಗಡೆ ಮಾಡಲು ನಿರ್ಧಾರಿಸಿದ್ದಾರೆ.
ಈ ಕುರಿತು ಡೈಜಿವರ್ಲ್ಡ್ ಜೊತೆ ಮಾತನಾಡಿದ ಚಿತ್ರದ ನಿರ್ದೇಶಕ ಪ್ರದೀಪ್ ಬರ್ಬೋಜಾ, "ಯುಎಇಯಲ್ಲಿ 'ಸೋಡಾ ಶರ್ಬತ್' ಚಿತ್ರವನ್ನು ಬಿಡುಗಡೆ ಮಾಡುವುದು ನಮ್ಮ ಕನಸಾಗಿತ್ತು. ಚಿತ್ರದಲ್ಲಿ ಯುಎಇಯ ನಾಯಕಿ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ ಮತ್ತು ಅವರ ಹಿಂಬಾಲಕರು ಅವರನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಸಾಕಷ್ಟು ಕಾಯುತ್ತಿದ್ದಾರೆ. ಇನ್ನು ಯುಎಇಯಲ್ಲಿ ತುಳು ನಾಟಕ ಅಥವಾ ಚಲನಚಿತ್ರಗಳನ್ನು ನೋಡಿ ಸಂಭ್ರಮಿಸುತ್ತಾರೆ. ಹಾಗಾಗಿ 'ಸೋಡಾ ಶರಬತ್' ನೋಡುವ ಮೂಲಕ ನಿಮ್ಮ ಫೆಬ್ರವರಿಯನ್ನು ಸಂತೋಷದಿಂದ ಕಳೆಯಲು ಇದೊಂದು ಸುವರ್ಣಾವಕಾಶ ಎಂದರು.
ಪ್ರದೀಪ್ ಅವರ ನಿರ್ದೇಶದನದ ಸೋಡಾ ಶರ್ಬತ್ ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್, ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಂಜೂರು, ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು ಕೊಂಕಣಿಯ ಖ್ಯಾತ ನಟ ಮೆಲ್ಲು ವೆಲೆನ್ಸಿಯಾ, ಪ್ರೈವೆಟ್ ಚಾಲೆಂಜ್ ಖ್ಯಾತಿಯ ವಾಲ್ಟರ್ ನಂದಳಿಕೆ, ಲವೀನಾ ಫೆರ್ನಾಂಡಿಸ್, ರಂಜಿತಾ ಸೇರಿದಂತೆ ಅನೇಕ ಮಂದಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಗಣೇಶ್ ನೀರ್ಚಾಲ್ ಈ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಯುವ ಪ್ರತಿಭೆ ಸಂತೋಷ್ ಕೆಲಸ ಮಾಡಿದ್ದಾರೆ. ಪ್ಯಾಟ್ಸನ್ ಪಿರೇರಾ ಮಂಗಳೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ತ್ಯಾಗರಾಜ್ ಮತ್ತು ನೀತು ನೀನಾದ್ ಈ ಚಿತ್ರದ ಹಿನ್ನೆಲೆ ಗಾಯಕರಾಗಿದ್ದಾರೆ. ಮೆಲ್ವಿನ್ ಎಲ್ಪೆಲ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಹಾಗೂ ಪ್ಯಾಟ್ಸನ್ ಪೆರೀರಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಗಣೇಶ್ ನೀರ್ಚಾಲ್ ಮಾಡಿದ್ದಾರೆ.
'ಏಕ್ ಅಸ್ಲ್ಯಾರ್ ಏಕ್ ನಾ' ಎಂಬ ಕೊಂಕಣಿ ಚಲನಚಿತ್ರವನ್ನು ನಿರ್ದೇಶಿಸುವ ಮೂಲಕ ಹೆಸರುಗಳಿಸಿದ್ದ ನಿರ್ದೇಶಕ ಪ್ರದೀಪ್, ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಲ್ಯಾನ್ಸಿ ಡಿ ಸೋಜಾ, ಡೈನಿ ಡಿ ಸೋಜಾ ಪಾಂಬೂರು, ಪೌಲ್ ಡಿ ಸೋಜಾ ಪಾಲಡ್ಕ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾದಲ್ಲಿ ಎರಡು ಹಾಡುಗಳಿದ್ದು, ಇಂಡಿಯನ್ ಐಡಲ್ ಖ್ಯಾತಿಯ ನಿಹಾಲ್ ತೌರೊ, ದೇವದಾಸ್ ಕಾಪಿಕಾಡ್ ಮತ್ತು ಭೋಜರಾಜ್ ವಾಮಂಜೂರ್ ಅವರ ಸ್ವರವಿದೆ. ಉಮೇಶ್ ಮಿಜಾರ್ ಮತ್ತು ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ.