ಮುಂಬೈ, ಜ 28 (DaijiworldNews/HR): ಬಹುಭಾಷಾ ನಟಿ ಸಮಂತಾ ಅವರು ಸದ್ಯ ಸ್ವಿಟ್ಜರ್ಲ್ಯಾಂಡ್ನಲ್ಲಿದ್ದು, ತಾವು ಸ್ಕೀಯಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ವಿಡಿಯೋವೊಂದನ್ನು ತಮ್ಮ ಇನ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಸಮಂತಾ, ಇಂತಹ ಸವಾಲಿನ ಆಟಕ್ಕೆ ಸೂಕ್ತ ತರಬೇತಿ ನೀಡಿ ಸಜ್ಜುಗೊಳಿಸಿದ ತಮ್ಮ ಗುರುವನ್ನೂ ಪರಿಚಯಿಸಿದ್ದು, ಸ್ಕೀಯಿಂಗ್ ಪಯಣದ ಕುರಿತು ಬರೆದುಕೊಂಡಿದ್ದಾರೆ.
ಇನ್ನು ಅಂಬೆಗಾಲಿಡುತ್ತಾ ಸ್ಕೀಯಿಂಗ್ ಆರಂಭಿಸಿದೆ. ನೂರಾರು ಬಾರಿ ಬಿದ್ದೆ. ಪ್ರತೀ ಬಾರಿಯೂ ಕಷ್ಟಪಟ್ಟು ಎದ್ದಿದ್ದೇನೆ. ಹಲವು ಬಾರಿ ಸಾಕು, ಬಿಟ್ಟುಬಿಡೋಣ ಎನ್ನಿಸಿತ್ತು. ಆದರೆ ಎಲ್ಲವನ್ನೂ ಎದುರಿಸುವುದನ್ನು ಹೇಳಿಕೊಟ್ಟ ಟ್ರೇನರ್ಗೆ ಆಭಾರಿ. ಎಲ್ಲಾ ಬದಲಾವಣೆಗೆ ಕಾರಣ ನೀವು ಎಂದಿದ್ದಾರೆ.
ಸ್ಕೀಯಿಂಗ್ ಮಾಡುವುದು ಸುಲಭವಲ್ಲ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಇದರ ಅನುಭವ ಬಹಳ ಕಡಿಮೆಯೆಂದೇ ಹೇಳಬೇಕು. ಆದ್ದರಿಂದ ಸ್ಕೀಯಿಂಗ್ ಮಾಡಲು ಪರಿಣಿತರಿಂದ ವಿಶೇಷ ತರಬೇತಿ ಪಡೆಯಬೇಕಾಗುತ್ತದೆ. ಹೀಗೆಯೇ ತರಬೇತಿ ಪಡೆದಿದ್ದ ಸಮಂತಾ, ಕೆಲ ದಿನಗಳ ಮೊದಲು ಯಶಸ್ವಿಯಾಗಿ ಸ್ಕೀಯಿಂಗ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.