ಮುಂಬೈ, ಜ 13 (DaijiworldNews/MS): ಅನಾಥ ಮಕ್ಕಳನ್ನು ದತ್ತು ಪಡೆದುಕೊಂಡು ಅವರಿಗೆ ತಂದೆ-ತಾಯಿಯರ ಪ್ರೀತಿಯನ್ನು ನೀಡಿ, ವಾತ್ಸಲ್ಯವನ್ನು ಮೆರೆದ ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಸುಶ್ಮಿತಾ ಸೇನ್ ಮೊದಲಿಗರಾಗಿ ನಿಲ್ಲುತ್ತಾರೆ. ಇಬ್ಬರು ಹೆಣ್ಣು ಮಕ್ಕಳ ಬಳಿಕ ಇದೀಗ ತಮ್ಮ ಮೂರನೇ ಮಗುವನ್ನು ದತ್ತು ಪಡೆದು ಮಾಜಿ ವಿಶ್ವಸುಂದರಿ ಸುಶ್ಮಿತಾ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಸ್ಪೂರ್ತಿಯಾಗಿದ್ದಾರೆ.
1994 ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲುವ ಮೂಲಕ ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಗೆದ್ದ ಮೊದಲ ಭಾರತೀಯ ಮಹಿಳೆ ಸುಶ್ಮಿತಾಸೇನ್. ನಂತರ ಬಾಲಿವುಡ್ ಹಾಗೂ ವಿಶ್ವ ಪ್ರಸಿದ್ಧ ಉತ್ಪನ್ನಗಳ ಅಂಬಾಸಿಡರ್ ಆಗಿ ದೊಡ್ಡ ಹೆಸರನ್ನು ಪಡೆದುಕೊಂಡರು. ನಟಿ ಸುಶ್ಮಿತಾ ಸೇನ್ ತನ್ನ 25ನೇ ವಯಸ್ಸಿನಲ್ಲಿ ತಾನಿನ್ನೂ ಅವಿವಾಹಿತೆ ಆಗಿದ್ದರೂ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡರು. ಈ ವೇಳೆ ಅವರು ಸಾಕಷ್ಟು ಟೀಕೆಗಳಿಗೂ ಗುರಿಯಾದರು.
2000ದಲ್ಲಿ ಸುಶ್ಮಿತಾ ಸೇನ್ ಮೊದಲ ಬಾರಿಗೆ ಹೆಣ್ಣು ಮಗು ರೀನಿಯನ್ನು ದತ್ತು ಪಡೆದಿದ್ದರು. ನಂತರ 2010ರಲ್ಲಿ ಅಲಿಶಾ ಎನ್ನುವ ಇನ್ನೊಂದು ಹೆಣ್ಣು ಮಗುವನ್ನು ದತ್ತು ಪಡೆಯುವ ಮೂಲಕ ಇಬ್ಬರು ಹೆಣ್ಣು ಮಕ್ಕಳಿಗೂ ತಾಯಿಯ ಪ್ರೀತಿಯನ್ನು ನೀಡುತ್ತಿದ್ದಾರೆ. ಅವಿವಾಹಿತರಾಗಿಯೇ ಉಳಿದಿರುವ ಸುಶ್ಮಿತಾ ಇತ್ತೀಚೆಗೆ ತಮಗಿಂತಲೂ ಕಿರಿಯನಾಗಿದ್ದ ರೋಹ್ಮನ್ ಶಾಲ್ ಅವರೊಂದಿಗೆ ಬ್ರೇಕಪ್ ಮಾಡಿಕೊಂಡು ಸುದ್ದಿಯಲ್ಲಿದ್ದರು.
ಇತ್ತೀಚೆಗೆ, ಸುಶ್ಮಿತಾ ಈಗ ತನ್ನ ಮೂರನೇ ಮಗುವನ್ನು - ಒಬ್ಬ ಮಗನನ್ನು ದತ್ತು ಪಡೆದಿದ್ದಾರೆ ಎಂದು ವರದಿಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡ ನಟಿ ತನ್ನ ಮಕ್ಕಳೊಂದಿಗೆ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ ಈ ವೇಳೆ ತಮ್ಮ ಮೂವರು ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ಆದರೆ ಗಂಡು ಮಗುವನ್ನು ದತ್ತು ಪಡೆದಿರುವ ಬಗ್ಗೆ ನಟಿ ಯಾವುದೇ ದೃಢೀಕರಣ ನೀಡಿಲ್ಲ.