ಮಂಗಳೂರು, ಜ 05 (DaijiworldNews/AN): ಬಿಗ್ ಬಾಸ್ ಖ್ಯಾತಿಯ ನಟಿ ಶುಭ ಪೂಂಜಾರವರು ತಮ್ಮ ಗೆಳೆಯ ಸುಮಂತ್ ಅವರೊಂದಿಗೆ ಇಂದು ಸರಳ ರೀತಿಯಲ್ಲಿ ವಿವಾಹವಾಗಿದ್ದಾರೆ.
ಪೂಂಜಾ ಅವರು ಹಲವು ಸಮಯದಿಂದ ಸುಮಂತ್ ಮಹಾಬಲ ಅವರೊಂದಿಗೆ ಪ್ರೀತಿಯಲ್ಲಿದ್ದು, 'ಡಿಸೆಂಬರ್ ಕೊನೇ ವಾರ ಅಥವಾ ಜನವರಿ ಮೊದಲ ವಾರದಲ್ಲಿ ನಾವಿಬ್ಬರು ಮದುವೆ ಆಗಲಿದ್ದೇವೆ' ಎಂದು ಇತ್ತೀಚೆಗೆ ಹೇಳಿದ್ದು, ಇದೀಗ ಸುಮಂತ್ ಜೊತೆಗೆ ಸರಳವಾಗಿ ಸಪ್ತಪದಿ ತುಳಿದ ಶುಭಾಗೆ ಅಭಿಮಾನಿಗಳು, ಆತ್ಮೀಯರು ಶುಭ ಹಾರೈಕೆ ತಿಳಿಸಿದ್ದಾರೆ.
ಇಂದು ತಮ್ಮ ಮದುವೆಯ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಶುಭಾ ಪೂಂಜಾ, 'ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ, ಗುರು-ಹಿರಿಯರು, ಕುಟುಂಬ ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ' ಎಂದು ಬರೆದುಕೊಂಡಿದ್ದಾರೆ.
ಶುಭಾರವರು ಮಂಗಳೂರು ಮೂಲದ ಹುಡುಗ ಸುಮಂತ್ ಮಹಾಬಲ ಅವರನ್ನು ಪ್ರೀತಿ ಮಾಡುತ್ತಿದ್ದು, ಈ ಹಿಂದೆಯೇ ಮದುವೆ ಆಗಬೇಕಿತ್ತು. ಈ ಮಧ್ಯೆ ಅವರು ಬಿಗ್ಬಾಸ್ಗೂ ಹೋಗಿ ಬಂದರು. ಅಲ್ಲಿಂದ ಹೊರಬಂದ ಬಳಿಕೆ ಮದುವೆ ಆಗುವುದಾಗಿ ತಿಳಿಸಿದ್ದರು.