ಮಂಗಳೂರು, ಡಿ. 29 (DaijiworldNews/HR): ತುಳು ಚಿತ್ರರಂಗವಾದ ಆರಂಭಿಕ 39 ವರ್ಷಗಳಲ್ಲಿ ಅಂದರೆ 2010ರ ವರೆಗೆ ಕೇವಲ 38 ಸಿನಿಮಾಗಳು ತೆರೆಗೆ ಬಂದಿದ್ದು, ಆ ಬಳಿಕ 11 ವರ್ಷಗಳಲ್ಲಿ ಒಟ್ಟು 81 ಚಿತ್ರಗಳು ಬೆಳ್ಳಿತೆರೆಗೆ ಬಂದಿದ್ದು, ಈ ಮಧ್ಯೆ ಚಿತ್ರ ಬಿಡುಗಡೆ ವಿಚಾರದಲ್ಲಿನ ಪೈಪೋಟಿಯು ಅನೇಕ ನಿರ್ಮಾಪಕರ ಕೈಸುಡುವಂತೆ ಮಾಡಿದೆ.
ವರ್ಷಕ್ಕೊಂದರಂತೆ ತೆರೆಗೆ ಬರುತ್ತಿದ್ದ ತುಳು ಸಿನಿಮಾ ಈಗ ವಾರಕ್ಕೊಂದೇ ತೆರೆಗೆ ಬಂದರೂ ಗೆಲ್ಲಿಸುವುದು ಕಷ್ಟವಿರುವಾಗ, ಕೋಸ್ಟಲ್ವುಡ್ನ ಎರಡು ಸಿನಿಮಾ ಒಂದೇ ದಿನ ಬಿಡುಗಡೆಯಾಗಿದ್ದು, ಈ ರೀತಿಯ ಬೆಳವಣಿಗೆಗೆ ತುಳು ಚಿತ್ರರಂಗದಲ್ಲಿಈಗಾಗಲೇ ಎರಡು ಬಾರಿಯಾಗಿದೆ.
2018ರ ಮಾರ್ಚ್ 23ರಂದು ಕಿಶೋರ್ ಮೂಡುಬಿದಿರೆ ನಿರ್ದೇಶನದ 'ಅಪ್ಪೆ ಟೀಚರ್' ಮತ್ತು ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ 'ತೊಟ್ಟಿಲ್' ಒಂದೇ ದಿನ ಬಿಡುಗಡೆಗೊಂಡಿದ್ದು, 2018ರ ಸೆ.21ರಂದು ದೇವದಾಸ್ ಕಾಪಿಕಾಡ್ ನಿರ್ದೇಶನದ 'ಏರಾ ಉಲ್ಲೆರ್ಗೆ' ಮತ್ತು ಮಯೂರ್ ಆರ್. ಶೆಟ್ಟಿ ನಿರ್ದೇಶನದ 'ಮೈ ನೇಮ್ ಈಸ್ ಅಣ್ಣಪ್ಪ' ಕೂಡ ಒಂದೇ ದಿನ ಬಿಡುಗಡೆಯಾಗಿದ್ದು, ನಿರ್ಮಾಪಕರು ಬಹಳ ತೊಂದರೆ ಅನುಭವಿಸಿದ್ದಾರೆ,
ಇನ್ನು ಇದೀಗ ಮತ್ತೆ ರಾಹುಲ್ ಅಮೀನ್ ಅವರ ಚೊಚ್ಚಲ ನಿರ್ದೇಶನದ 'ರಾಜ್ ಸೌಂಡ್ಸ್ ಅಂಡ್ ಲೈಟ್ಸ್' ಮತ್ತು ಇಸ್ಮಾಯಿಲ್ ಮೂಡುಶೆಡ್ಡೆ ಅವರ 'ಭೋಜರಾಜ ಎಂಬಿಬಿಎಸ್' ಸಿನಿಮಾ ಒಂದೇ ದಿನ ತೆರೆಗೆ ಬರಲು ಸಿದ್ಧತೆ ನಡೆಸಿದ್ದು, ಫೆ.11ರಂದು ಎರಡೂ ಚಿತ್ರ ತಂಡಗಳು ಸಿನಿಮಾ ಬಿಡುಗಡೆಗೆ ಸಿದ್ದತೆ ನಡೆಸಿಕೊಂಡಿದೆ.
ಯಾವ ಸಿನಿಮಾ ಮೊದಲು ಸೆನ್ಸಾರ್ ಆಗಿದೆಯೋ ಆ ಚಿತ್ರಕ್ಕೆ ಮೊದಲ ಆದ್ಯತೆ ನೀಡುವ ನಿಯಮವಿದ್ದು, ಈ ಎಲ್ಲಾ ತೊಂದರೆಯಿಂದಾಗಿ ಈ ಕುರಿತು ಪರಿಶೀಲನೆಗಾಗಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತುಳು ಚಿತ್ರ ರಂಗದ ಸಮಿತಿಯು ನಿರ್ಧರಿಸಿದೆ.