ಮಂಗಳೂರು, ಡಿ. 24 (DaijiworldNews/HR): ಪ್ರಸ್ತುತ ಕಾಲಘಟ್ಟದಲ್ಲಿ ಹೆಣ್ಣು ತಾನು ತನ್ನನ್ನು ತೊಡಗಿಸಿಕೊಳ್ಳದ ಕ್ಷೇತ್ರವೇ ಇಲ್ಲ.'ಆಡು ಮುಟ್ಟದ ಸೊಪ್ಪಿಲ್ಲ' ಎಂಬಂತೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರವೇಶಿಸುತ್ತಿರುವವಳು ಹೆಣ್ಣು. ಇಂತಹ ಸಂದರ್ಭದಲ್ಲಿ ಹಾಸ್ಯ ಪಾತ್ರದಿಂದಲೇ ಜನಮನ ಗೆದ್ದು ತಾನು ನಟನೆಗೂ ಸೈ ನಾಟ್ಯಕ್ಕೆ ಸೈ ಅನಿಸಿಕೊಂಡು ತನ್ನ ನಾಡಿನಲ್ಲಿ ಜ್ಯೋತಿಯಂತೆ ಪ್ರಜ್ವಲಿಸುತ್ತಿರುವ ಜ್ಯೋತಿ ಕುಲಾಲ್.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ, 34 ನೆಕ್ಕಿಲಾಡಿ ಗ್ರಾಮ, ಸುಭಾಸ್ ನಗರದ ಕೃಷ್ಣಪ್ಪ ಕುಲಾಲ್ ಹಾಗು ರೂಪಾ ದಂಪತಿಯ ಮೊದಲನೆಯ ಪುತ್ರಿ. ತಂದೆ ಒಬ್ಬ ಅದ್ಬುತ ಯಕ್ಷಗಾನ ಕಲಾವಿದರಾಗಿ ಜನ ಮನ್ನಣೆಯಾದವರು. ಹಾಗಾಗಿ ಇವರಿಗೆ ಕಲೆಯ ಮೇಲಿನ ಅಭಿರುಚಿ ರಕ್ತ ಗತ ವಾಗಿ ಬಂದಿದೆ. ಇವರಿಗೆ ಸಣ್ಣ ವಯಸ್ಸಿನಲ್ಲಿಯೇ ಕಲೆಯ ಮೇಲೆ ಒಲವು ಇತ್ತು. ದಕ್ಷಿಣ ಕನ್ನಡ ಜಿಲ್ಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಪ್ಪಿನಂಗಡಿಯಲ್ಲಿ 1 ರಿಂದ 7 ನೇ ತರಗತಿಯ ವಿದ್ಯಾಭ್ಯಾಸ ಹಾಗೂ ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು ನಲ್ಲಿ 8 ರಿಂದ 10ನೇ ತರಗತಿಯ ವಿದ್ಯಾಭ್ಯಾಸವನ್ನು ಮುಗಿಸಿದರು.
ಇವರ ನಟನೆಯ ಮೊದಲ ಗುರು ಹಾಗೂ ಪ್ರೇರಣೆ ತಂದೆ ಕೃಷ್ಣಪ್ಪ ಕುಲಾಲ್. ರಾಮನಗರ ಉಪ್ಪಿನಂಗಡಿಯಲ್ಲಿ ನಡೆದ 'ಅತ್ತಿಗೆ' ಎಂಬ ನಾಟಕಕ್ಕೆ ಮೊದಲು ಮುಖಕ್ಕೆ ಬಣ್ಣ ಬಳಿದರು. ಸುಮಾರು 12ವರ್ಷಗಳ ಕಾಲ ರಂಗಭೂಮಿಯಲ್ಲಿ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಈವರೆಗೆ ಅನೇಕ ವೇದಿಕೆಗಳಲ್ಲಿ ಇವರನ್ನು ಸನ್ಮಾನಿಸಲಾಗಿದೆ.
ಇನ್ನು ಗಂಧದಗುಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಇಂಗ್ಲಿಷ್ ಬರ್ಪುಜಿ ಬ್ರೋ, ನಾನ್ ವೆಜ್, ಪಿರ್ಕಿಲು ಬತ್ತೆರಾ, ಅಕ್ಷಮ್ಯ ಎಂಬ ಆರು ಚಲನಚಿತ್ರಗಳಲ್ಲಿ ಪಾತ್ರ ಮಾಡಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ನ್ಯಾಯಾಲಯದಲ್ಲಿರುವ ಬೆರಳಚ್ಚುಗಾರರಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಶಿರ್ಡಿ ಸಾಯಿಬಾಬಾ, ದೇವೆರೆನ ದಯೆ, ಕಣ್ಣ್ ಕಟ್ಟ್, ಕಟೀಲು ಕ್ಷೇತ್ರ ಚರಿತೆ ಎಂಬ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹೊಸ ತಿರುವು, ಧನ್ವಂತರಿ ಮಹಿಮೆ, ನಿರಾಕರಣ,ಮನವಿ,ಧರ್ಮದೈವ -2 ಇವರು ಪಾತ್ರ ಮಾಡಿರುವ ಕಿರು ಚಿತ್ರಗಳು ಇವು. ಇಷ್ಟು ಮಾತ್ರವಲ್ಲದೆ ಸುಮಾರು 42 ನಾಟಕಗಳಲ್ಲಿ ಪಾತ್ರ ಮಾಡಿದ್ದಾರೆ.
ಮುಖ್ಯಭೂಮಿಕೆಯಲ್ಲಿ 'ಪನ್ಪಿನಕುಲು ಪನ್ವೆರ್' ನಾಟಕದಲ್ಲಿ ನೇತ್ರಾ ಎಂಬ ಹೆಸರಿನ ಕುರುಡಿಯ ಪಾತ್ರವನ್ನು, 'ಸತ್ಯೋದ ಬೊಲ್ಪು' ನಾಟಕದಲ್ಲಿ ಧಾರವಾಡದ ಕನ್ನಡ ಹೆಣ್ಣು ಬಸಮ್ಮ ಎಂಬ ಹೆಸರಿನಲ್ಲಿ ಹಾಸ್ಯ ಪಾತ್ರವನ್ನು,' ಪುದರ್ಲ ಬೋಡ್ಚಿ, ಊರುಲ ಬೋಡ್ಚಿ' ನಾಟಕದಲ್ಲಿ ಹಾಸ್ಯ ಪಾತ್ರ, 'ಸೇವಂತಿ ನ 'ಮದಿಮೆ ನಾಟಕದಲ್ಲಿ ಕಪ್ಪು ಬಣ್ಣದ ಪಾಪದ ಹೆಣ್ಣಿನ ಪಾತ್ರ ,ಹಾಗೂ 'ಲಿಂಕ್ ಲಿಂಗಪ್ಪೆ' ಎಂಬ ನಾಟಕದಲ್ಲಿ ಹಾಸ್ಯ ಪಾತ್ರವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದರು. ಇವರ 'ಪನ್ಪಿನಕುಲು ಪನ್ವೆರ್' ನಾಟಕಕ್ಕೆ 'ಶ್ರೇಷ್ಠನಟಿ' ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡರು.
ಇನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ 'ಬಲೆ ತೆಲಿಪಾಲೆ 'ಸೀಸನ್ -7 ನಲ್ಲಿ 7ನೇ ಸ್ಥಾನವನ್ನು "ಮಕ್ಕರ್ ತಂಡ ಪುತ್ತೂರು " ಈ ತಂಡದೊಂದಿಗೆ ಪಡೆದಿದ್ದಾರೆ. ಇವರು ಸುಮಾರು ಏಳು ನಾಟಕ ಸಂಸ್ಥೆಗಳೊಂದಿಗೆ ಕಲಾವಿದೆಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಈ ಸಾಧನೆಗಳಿಗೆ ಪ್ರೇರಣೆಯಾದ ಮಹಾನ್ ಮಾರ್ಗದರ್ಶಕರು ಎಂದರೆ ವಿಶ್ವನಾಥ್ ಹೆಚ್ ಬೆಳ್ಳಿಪ್ಪಾಡಿ, ಅರುಣ್ ಚಂದ್ರ ಬಿ.ಸಿ ರೋಡ್, ರಮಾ ಬಿ.ಸಿ ರೋಡ್, ಕೇಶವ ಮಚ್ಚಿಮಲೆ, ದಯಾನಂದ ರೈ, ರವಿ ರಾಮಕುಂಜ, ಶಿವಕುಮಾರ್ ರೈ ಮುಡಿಪು ಪ್ರಮುಖರು.
ನಾನು ಇಷ್ಟು ಮಟ್ಟಕ್ಕೆ ಬೆಳೆಯಬೇಕೆಂದರೆ ಅನೇಕ ಅಡಚಣೆಗಳನ್ನು ದಾಟಿ ಬಂದಿದ್ದೇನೆ. ಪ್ರತಿಯೊಬ್ಬ ಸಾಧಕನಿಗೂ ಮನೆಯವರ ಸಹಕಾರ ಅತಿಮುಖ್ಯ. ಅವರ ಸಮ್ಮತಿ ಸಹಕಾರ ಇದ್ದರೆ ಏನನ್ನು ಸಾಧಿಸಬಹುದು. ನನ್ನ ಈ ಸಾಧನೆಗೆ ಬೆನ್ನೆಲುಬಾಗಿ ನಿಂತ ನನ್ನ ತಂದೆ-ತಾಯಿಗೆ, ಗುರುಗಳಿಗೆ ಹಾಗೂ ಊರಿನವರ ಸಹಕಾರಕ್ಕಾಗಿ ನಾನು ಎಂದೆಂದಿಗೂ ಋಣಿ ಸಾಧಕಿಯ ಮಾತು
ದೀಪ್ತಿ ಅಡ್ಡಂತಡ್ಕ
ಪ್ರಥಮ ಪತ್ರಿಕೋದ್ಯಮ
ವಿವೇಕಾನಂದ ಕಾಲೇಜು ಪುತ್ತೂರು