ನವದೆಹಲಿ, ನ.18 (DaijiworldNews/HR): ಬಾಲಿವುಡ್ ನಟಿ ಮತ್ತು ನಿರ್ಮಾಪಕಿ ಪ್ರೀತಿ ಜಿಂಟಾ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದು, ಅವರಿಗೆ ಜೈ ಮತ್ತು ಜಿಯಾ ಎಂಬ ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಪತಿ ಜೀನ್ ಗುಡೆನಫ್ ಅವರೊಂದಿಗಿನ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ಜಿಂಟಾ ಈ ವಿಚಾರವನ್ನು ಬಹಿರಂಗಪಡಿಸಿದ್ದು, "ಎಲ್ಲರಿಗೂ ನಮಸ್ಕಾರ, ನಾನು ಇಂದು ಸಂತೋಷದ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಜೀನ್ ಮತ್ತು ನಾನು ತುಂಬಾ ಸಂತೋಷಪಟ್ಟಿದ್ದು, ನಾವು ನಮ್ಮ ಅವಳಿ ಮಕ್ಕಳಾದ ಜೈ ಜಿಂಟಾ ಗುಡೆನಫ್ ಮತ್ತು ಜಿಯಾ ಜಿಂಟಾ ಗುಡೆನಫ್ ಅನ್ನು ನಮ್ಮ ಕುಟುಂಬಕ್ಕೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೇವೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ವೈದ್ಯರು ಮತ್ತು ಬಾಡಿಗೆ ತಾಯಿಗೆ ನಟಿ ಧನ್ಯವಾದಗಳನ್ನು ಅರ್ಪಿಸಿದ್ದು, ಅಭಿಮಾನಿಗಳಿಂದ ಶುಭಾಶಯದ ಸುರಿಮಳೆಯೇ ಹರಿದು ಬಂದಿದೆ.
ಪ್ರೀತಿ ಜಿಂಟಾ ಫೆಬ್ರವರಿ 29, 2016 ರಂದು ಜೀನ್ ಗುಡ್ನಫ್ ಅವರನ್ನು ಮದುವೆಯಾಗಿದ್ದು, ಬಳಿಕ ಲಾಸ್ ಏಂಜಲೀಸ್ಗೆ ತೆರಳಿದ್ದಾರೆ.
ಇನ್ನು ಪ್ರೀತಿ ಜಿಂಟಾ ಮಣಿರತ್ನಂ ಅವರ 1998 ರ ಚಲನಚಿತ್ರ ದಿಲ್ ಸೇ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದು, ಈ ಸಿನಿಮಾವು ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ರಾಷ್ಟ್ರೀಯ ಪ್ರಶಸ್ತಿಗಳು, ಏಳು ಫಿಲ್ಮ್ಫೇರ್ ಪ್ರಶಸ್ತಿಗಳು ಮತ್ತು ವಿಶೇಷ ಉಲ್ಲೇಖ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದಿದೆ.