ಬೆಂಗಳೂರು, ನ.17 (DaijiworldNews/PY): ತಮಿಳು ನಟ ವಿಶಾಲ್ ಅವರು ಮೈಸೂರಿನ ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಹೊರಲು ಸಿದ್ದರಾಗಿದ್ದಾರೆ. ಬುಧವಾರ ದಿ. ನಟ ಪುನೀತ್ ರಾಜ್ಕುಮಾರ್ ಅವರ ಮನೆಗೆ ಆಗಮಿಸಿದ್ದು, ಪುನೀತ್ ಪತ್ನಿ ಅಶ್ವಿನಿ ಬಳಿ ಈ ವಿಚಾರವಾಗಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಶಿವರಾಜ್ ಕುಮಾರ್ ಅವರೊಂದಿಗೆ ಮಾತನಾಡಿದ್ದ ವಿಶಾಲ್, ಇಂದು ಪುನೀತ್ ಅವರ ಮನೆಗೆ ಆಗಮಿಸಿ ಶಕ್ತಿಧಾಮದ ಮಕ್ಕಳ ಜವಾಬ್ದಾರಿಯ ಬಗ್ಗೆ ಅಶ್ವಿನಿ ಅವರೊಂದಿಗೆ ಪ್ರಸ್ತಾಪಿಸಿ ಅನುಮತಿ ಕೇಳಿದ್ದಾರೆ. ಈ ವೇಳೆ ಅಶ್ವಿನಿ ಅವರು, ಈ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.
ಶಕ್ತಿಧಾಮದ ಮಕ್ಕಳ ಜವಾಬ್ದಾರಿ ಬಗ್ಗೆ ಅಶ್ವಿನಿ ಹಾಗೂ ಶಿವಣ್ಣ ಅವರೊಂದಿಗೆ ವಿಶಾಲ್ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ವಿಶಾಲ್ ಅಪ್ಪು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ.
"ಪುನೀತ್ ರಾಜ್ಕುಮಾರ್ ಅವರು 1,800 ಮಕ್ಕಳಿಗೆ ಉಚಿತ ಶಿಕ್ಷಣ, ಅನಾಥಾಶ್ರಮ, ವೃದ್ಧಾಶ್ರಮ ನಡೆಸುವುದರೊಂದಿಗೆ ತಮ್ಮ ಸಾವಿನ ನಂತರವೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಪುನೀತ್ ಅವರ ಗೆಳೆಯನಾಗಿ ಮಾತು ಕೊಡುತ್ತಿದ್ದೇನೆ, 1,800 ಮಕ್ಕಳಿಗೆ ನಾನು ವಿದ್ಯಾಭ್ಯಾಸ ಕೊಡಿಸುತ್ತೇನೆ. ನಿಮ್ಮ ಫೌಂಡೇಷನ್, ನಿಮ್ಮ ಸಮಾಜಸೇವೆಯನ್ನು ಮುಂದಿನ ವರ್ಷದಿಂದ ನಾನು ಮುಂದುವರಿಸುತ್ತೇನೆ" ಎಂದು ವಿಶಾಲ್ ಭರವಸೆ ನೀಡಿದ್ದರು.