ಮಂಗಳೂರು, ನ.11 (DaijiworldNews/HR): ಬಹು ನಿರೀಕ್ಷಿತ ತುಳು ಸಿನಿಮಾ ಸೋಡಾ ಶರ್ಬತ್ ಇದರ ಫಸ್ಟ್ ಲುಕ್ ಪೋಸ್ಟರ್ ಅನ್ನು ಪ್ರೈವೆಟ್ ಚಾಲೆಂಜ್ ಖ್ಯಾತಿಯ ಜೋಡಿ ಅರವಿಂದ್ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ಅವರು ನವೆಂಬರ್ 10 ರಂದು ದುಬೈನ ವಿನ್ನಿ ರೆಸ್ಟೋರೆಂಟ್ ಹಾಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
-
ಅರವಿಂದ ಬೋಳಾರ್ ಮಾತನಾಡಿ, "ಈ ಸಿನಿಮಾದ ನಿರ್ದೇಶಕ ಪ್ರದೀಪ್ ನನಗೆ ಬಹಳ ವರ್ಷಗಳಿಂದ ಪರಿಚಯ. ಅವರ ನಾಟಕದಲ್ಲೂ ನಟಿಸಿದ್ದೇನೆ. ಅವರ ಎಲ್ಲಾ ಸಿನಿಮಾ ಸಂಬಂಧಿ ಪ್ರಾಜೆಕ್ಟ್ಗಳಿಗೆ ನಾನು ಖಾಯಂ ಸದಸ್ಯ. ಇದು ನನಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಮಂಗಳೂರು ಮತ್ತು ದುಬೈನ ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾಗೆ ನಾವೆಲ್ಲರೂ ಬೆಂಬಲ ನೀಡಬೇಕು" ಎಂದು ಹೇಳಿದ್ದಾರೆ.
ಚಿತ್ರತಂಡಕ್ಕೆ ಶುಭ ಹಾರೈಸಿದ ವಾಲ್ಟರ್ ನಂದಳಿಕೆ, "ಪ್ರದೀಪ್ ಅವರ ಪ್ರತಿಭೆಯ ಬಗ್ಗೆ ಇಡೀ ತುಳುನಾಡಿಗೆ ತಿಳಿದಿದೆ. ಅವರು ಚಲನಚಿತ್ರ ನಿರ್ಮಾಣದ ಎಲ್ಲಾ ವಿಭಾಗಗಳಲ್ಲಿ ಪರಿಣತರು. ತುಳು ಭಾಷೆಯಲ್ಲಿ ಅವರ ಕನಸಿನ ಯೋಜನೆ ಸೋಡಾ ಶರ್ಬತ್. ಈ ಯೋಜನೆಯ ಹಿಂದೆ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಈಗ ಚಿತ್ರವು ಸಿದ್ಧವಾಗಿದೆ ಮತ್ತು ಅದರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯ ಭಾಗವಾಗಲು ನಾನು ಸಂತೋಷಪಡುತ್ತೇನೆ" ಎಂದಿದ್ದಾರೆ.
ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದ ನಿರ್ದೇಶಕ ಪ್ರದೀಪ್, "ನನ್ನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಅವಕಾಶ ನೀಡಿದ ದಾಯ್ಜಿ ರಂಗಮಂದಿರಕ್ಕೆ ಧನ್ಯವಾದಗಳು. ತುಳು ಭಾಷೆಯಲ್ಲಿ ಸಿನಿಮಾ ಮಾಡುವ ಕನಸಿತ್ತು. ಈಗ ಆ ಕನಸನ್ನು ನನಸಾಗಿಸಿಕೊಳ್ಳಲು ಹತ್ತಿರವಾಗಿದ್ದೇನೆ. ನನ್ನ ಸ್ನೇಹಿತರಾದ ಲ್ಯಾನ್ಸಿ, ಡಯಾನಿ, ಪೌಲ್ ಮತ್ತು ಪ್ರಶಾಂತ್ ಸಹ ನಿರ್ಮಾಪಕರಾಗಿ ಈ ಸಿನಿಮಾದಲ್ಲಿ ನನಗೆ ಸಹಾಯ ಮಾಡಿದ್ದಾರೆ. ಅದೇ ಸಮಯದಲ್ಲಿ ನಾನು ದುಬೈ ಮತ್ತು ಭಾರತದ ಎಲ್ಲಾ ಕಲಾವಿದರು, ತಾಂತ್ರಿಕ ತಂಡಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಿ ಹಾರೈಸಿ" ಎಂದು ಹೇಳಿದ್ದಾರೆ.
ಪಿಬಿಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ನಿರ್ದೇಶನದ ಜೊತೆಗೆ ಪ್ರದೀಪ್ ಈ ಸಿನಿಮಾಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.
ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್, ಖ್ಯಾತ ಹಾಸ್ಯ ನಟ ಭೋಜರಾಜ್ ವಾಮಂಜೂರು, ತೆಲಿಕೆದ ಬೊಳ್ಳಿ ಖ್ಯಾತಿಯ ದೇವದಾಸ್ ಕಾಪಿಕಾಡ್, ಉಮೇಶ್ ಮಿಜಾರ್, ಪ್ರಸನ್ನ ಬೈಲೂರು ಕೊಂಕಣಿಯ ಖ್ಯಾತ ನಟ ಮೆಲ್ಲು ವೆಲೆನ್ಸಿಯಾ, ಲವೀನಾ ಫೆರ್ನಾಂಡಿಸ್, ರಂಜಿತಾ ಸೇರಿದಂತೆ ಅನೇಕ ಮಂದಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಮೆಲ್ವಿನ್ ಎಲ್ಪೆಲ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಹಾಗೂ ಪ್ಯಾಟ್ಸನ್ ಪೆರೀರಾ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಂಕಲನವನ್ನು ಗಣೇಶ್ ನೀರ್ಚಾಲ್ ಮಾಡಿದ್ದಾರೆ.
ಪೋಸ್ಟರ್ ಬಿಡುಗಡೆಯ ವೇಳೆ ಕಲಾವಿದ ಜೋಸೆಫ್ ಮಥಾಯಿಸ್, ದೈಜಿ ರಂಗಮಂದಿರದ ಸಂಸ್ಥಾಪಕ ದಯಾನ್ ಡಿ ಸೋಜಾ, ದೈಜಿ ದುಬೈ ಸಂಚಾಲಕ ನಾಣು ಮರೋಲ್ ಮತ್ತು ಚಿತ್ರದ ನಿರ್ದೇಶಕ ಪ್ರದೀಪ್ ಬರ್ಬೋಜಾ, ಪಾಲಡ್ಕ. ಚಿತ್ರದ ಸಹ ನಿರ್ಮಾಪಕರಾದ ಲ್ಯಾನ್ಸಿ ಡಿ ಸೋಜಾ, ಓಂಜೂರ್, ಡಯಾನಿ ಡಿ ಸೋಜಾ, ಪಾಂಬೂರ್, ಪೌಲ್ ಡಿ ಸೋಜಾ, ಪಾಲಡ್ಕ, ನಟರಾದ ಲವೀನಾ ಫ್ರೆನಾಂಡಿಸ್, ರಂಜಿತಾ ಉಪಸ್ಥಿತರಿದ್ದರು.