ಮುಂಬೈ, ನ 06 (DaijiworldNews/MS): ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾದ ನಂತರ ಪತಿ ನಿಕ್ ಜೊತೆಗೆ ಯುಎಸ್ಎನಲ್ಲಿ ನೆಲೆಸಿದ್ದಾರೆ. ಪತಿಯೊಡನೆ ಅಮೆರಿಕದಲ್ಲಿ ನೆಲೆಸಿದ್ದರೂ ಪ್ರಿಯಾಂಕಾ ಭಾರತೀಯ ಸಂಪ್ರದಾಯವನ್ನು ಖುಷಿ ಖುಷಿಯಾಗಿಯೇ ಆಚರಿಸುತ್ತಾರೆ. ಹಿಂದುಗಳ ಪಾಲಿಗೆ ದೊಡ್ಡ ಹಬ್ಬವಾದ ದೀಪಾವಳಿಯನ್ನು ಪ್ರಿಯಾಂಕಾ ಚೋಪ್ರಾ ಸಂಭ್ರಮದಿಂದ ಆಚರಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಕ್ಯಾಲಿಪೋರ್ನಿಯಾದ ಮನೆಯಲ್ಲಿ ತಮ್ಮ ಕುಟುಂಬದವರ ಹಾಗೂ ಆಪ್ತರ ಜೊತೆ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಪ್ರಿಯಾಂಕಾ ಚೋಪ್ರಾ ಸುಂದರವಾಗಿ ಕಾಣುತ್ತಿದ್ದರು. ನಿಕ್ ಜೋನಾಸ್ ಅವರು ಲಕ್ಷ್ಮಿ ಪೂಜೆಯನ್ನು ಮಾಡುವಾಗ ಕಸೂತಿ ಬಿಳಿ ಕುರ್ತಾವನ್ನು ಧರಿಸಿದ್ದರು.
ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ದೀಪಾವಳಿ ಶುಭಾಶಯ ಕೋರಿರುವ ನಿಕ್ ಜೋನ್ಸ್, 'ನನ್ನ ಹೆಂಡತಿ ಪ್ರಿಯಾಂಕಾ ಭಾರತೀಯ ಅದ್ಭುತ ಸಂಪ್ರದಾಯಗಳನ್ನು ನನಗೆ ಪರಿಚಯಿಸಿದ್ದಾರೆ' ಎಂದಿದ್ದಾರೆ.ಮಹಾಲಕ್ಷ್ಮಿ ದೇವಿಯ ಆಶೀರ್ವಾದದೊಂದಿಗೆ ನಾವು ಅವಳ ಕೃಪೆ ಮತ್ತು ಸಮೃದ್ಧಿಯನ್ನು ನಮ್ಮ ಮನೆಗೆ ಆಹ್ವಾನಿಸುತ್ತೇವೆ. ದೀಪಾವಳಿಯ ಶುಭಾಶಯಗಳು ಎಂದು ಪ್ರಿಯಾಂಕಾ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ
ರಾತ್ರಿ ದೀಪ ಬೆಳಗುವ ಕಾರ್ಯಕ್ರಮ ಇಟ್ಟುಕೊಂಡಿದ್ದ ಪ್ರಿಯಾಂಕಾ ಆಕರ್ಷಕ ಬಿಳಿ ಲೇಹೆಂಗಾದಲ್ಲಿ ಕಂಗೊಳಿಸಿದರೆ, ನಿಕ್ ಜೋನಸ್ ಕೂಡ ಭಾರತೀಯ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಇಬ್ಬರೂ ಕೂಡ ಇನ್ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.