ಬೆಂಗಳೂರು,ಅ. 30(DaijiworldNews/HR): 1976ರಲ್ಲಿ ತೆರೆಕಂಡ 'ಪ್ರೇಮದ ಕಾಣಿಕೆ' ಸಿನಿಮಾದಲ್ಲಿ ಕಾಣಿಸಿಕೊಂಡ ಆರು ತಿಂಗಳ ಮಗುವೇ ಮುಂದೆ ಕನ್ನಡ ಚಿತ್ರರಂಗದಲ್ಲಿ 'ಯುವರತ್ನ'ನಾಗಿ ಮೆರೆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್.
ಡಾ. ರಾಜ್ ಕುಮಾರ್ ನಟಿಸಿದ್ದ ನಿರ್ದೇಶಕ ವಿ. ಸೋಮಶೇಖರ್ ಅವರ ಥ್ರಿಲ್ಲರ್ ಚಿತ್ರ ‘ಪ್ರೇಮದ ಕಾಣಿಕೆಯಲ್ಲಿ ಮಗುವಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಪುನೀತ್, ನಂತರ ಕೃಷ್ಣಮೂರ್ತಿ ಪುರಾಣಿಕ್ ಅವರ ಕಾದಂಬರಿಯನ್ನು ಆಧರಿಸಿದ ವಿಜಯ್ ಅವರ 'ಸನಾದಿ ಅಪ್ಪಣ್ಣ', ಒಂದು ವರ್ಷದ ಮಗುವಾಗಿದ್ದಾಗ 'ತಾಯಿಗೆ ತಕ್ಕ ಮಗ', ಎರಡು ವರ್ಷಗಳ ನಂತರ, ನಿರ್ದೇಶಕರು ದೊರೈ-ಭಗವಾನ್ ಅವರ 'ವಸಂತ ಗೀತ' ದಲ್ಲಿ ನಟಿಸಿದರು.
ಇನ್ನು 'ಚಲಿಸುವ ಮೊಡಗಳು' ಮತ್ತು 'ಹೊಸಬೆಳಕು' ಚಿತ್ರಗಳಲ್ಲಿ ತಂದೆಯೊಂದಿಗೆ ನಟಿಸಿದ ಅಪ್ಪು ‘ಚಲಿಸುವ ಮೊಡಗಳು’ ಚಿತ್ರಕ್ಕಾಗಿ ಮೊದಲ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ‘ಅತ್ಯುತ್ತಮ ಬಾಲ ನಟ’ ಪಡೆದುಕೊಂಡಿದ್ದರು.
1983 ರಲ್ಲಿ ಪುನೀತ್ ಅವರು ಎರಡು ಪೌರಾಣಿಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, 'ಭಕ್ತ ಪ್ರಹ್ಲಾದ' ಚಿತ್ರದಲ್ಲಿ, ಪ್ರಹ್ಲಾದನ ಪಾತ್ರ ನಿರ್ವಹಿಸಿ ತಂದೆಯ ಹಿರಣ್ಯ ಕಶ್ಯಪು ಪಾತ್ರಕ್ಕೆ ತನ್ನ ಸಮಬಲದ ಅಭಿನಯ ತೋರಿದ್ದರು. ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಎರಡನೇ ಬಾರಿ ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಪಡೆದಿದ್ದರು.
ಬಾಲನಟನಾಗಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಪುನೀತ್ 2002ರಲ್ಲಿ 'ಅಪ್ಪು' ಚಿತ್ರದ ಮೂಲಕ ನಾಯಕನಾಗಿ ಪುನರಾಗಮನ ಮಾಡಿದ್ದು, ಈ ಚಿತ್ರ ದಲ್ಲಿ ರಕ್ಷಿತಾ ಅವರು ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದರು.