ಮುಂಬೈ, ಅ.27 (DaijiworldNews/PY): ಡಿಸೆಂಬರ್ ತಿಂಗಳಿನಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ವಿವಾಹವಾಗಲಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.
ಸೆಲೆಬ್ರಿಟಿ ಮ್ಯಾನೇಜರ್ ಖ್ಯಾತಿಯ ರೇಷ್ಮಾ ಶೆಟ್ಟಿ ಅವರನ್ನು ವಿಕ್ಕಿ ಹಾಗೂ ಕತ್ರಿನಾ ಕೈಫ್ ಅವರು ಭೇಟ ಮಾಡಿರುವ ವಿಚಾರ ಇದಕ್ಕೆ ಪುಷ್ಠಿ ನೀಡಿದೆ.
ರೇಷ್ಮಾ ಶೆಟ್ಟಿ ಅವರು ಆಡಿಯೋ ಬಿಡುಗಡೆ, ವಿವಾಹ, ಸಿನಿಮಾ ಪ್ರಚಾರ, ನಿಶ್ಚಿತಾರ್ಥ ಸೇರಿದಂತೆ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ವಿಕ್ಕಿ ಹಾಗೂ ಕತ್ರಿನಾ ವಿವಾಹ ಕಾರ್ಯಕ್ರಮ ಕುರಿತು ರೇಷ್ಮಾ ಶೆಟ್ಟಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅಭಿಮಾನಿಗಳು ಸಂತಸದಲ್ಲಿದ್ದಾರೆ. ಇಬ್ಬರು ರೇಷ್ಮಾ ಶೆಟ್ಟಿ ಅವರ ಕಚೇರಿಯಲ್ಲಿ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಬಳಿಕ ವಿಕ್ಕಿ ಹಾಗೂ ಕತ್ರಿನಾ ಪ್ರತ್ಯೇಕ ಕಾರುಗಳಲ್ಲಿ ತೆರಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಗಳು ಹರಿದಾಡುತ್ತಿವೆ.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದು, ಇದಿಗ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. 2019ರಲ್ಲಿ ದೀಪಾವಳಿ ಹಬ್ಬದ ಸಂದರ್ಭ ವಿಕ್ಕಿ ಮನೆಗೆ ಕತ್ರಿನಾ ಭೇಟಿ ನೀಡಿದ್ದರು. ವಿಕ್ಕಿ ಅವರ ಕುಟುಂಬಕ್ಕೆ ಕತ್ರಿನಾ ಅವರ ತುಂಬಾ ಹತ್ತಿರವಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕತ್ರಿನಾ ಕೈಫ್ ಅವರು ಸದ್ಯ ಟೈಗರ್-3 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದ ನಂತರ ವಿವಾಹ ನಿಶ್ಚಿತ ಎನ್ನಲಾಗಿದೆ.
ಆದರೆ, ಕತ್ರಿನಾ ಹಾಗೂ ವಿಕ್ಕಿ ವಿವಾಹದ ಬಗ್ಗೆ ಯಾವುದೇ ರೀತಿಯಾದ ಅಧಿಕೃತ ಹೇಳಿಕೆ ಕೊಟ್ಟಿಲ್ಲ.