ಮುಂಬೈ, ಅ.17 (DaijiworldNews/HR): ನಟ ಅಕ್ಷಯ್ ಕುಮಾರ್ ಅಭಿನಯದ ‘ಗೋರ್ಕಾ’ ಸಿನಿಮಾದ ಫಸ್ಟ್ಲುಕ್ ಅನಾವರಣಗೊಂಡಿದ್ದು, ಸೈನಿಕನ ಗೆಟಪ್ನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಆದರೆ 'ಗೋರ್ಕಾ' ಚಿತ್ರತಂಡ ಹಂಚಿಕೊಂಡ ಪೋಸ್ಟರ್ನಲ್ಲಿ ಒಂದು ತಪ್ಪು ಕಾಣಿಸಿದ್ದು, ಅದನ್ನು ಮಾಜಿ ಸೇನಾಧಿಕಾರಿಯೊಬ್ಬರು ಕಂಡುಹಿಡಿದಿದ್ದಾರೆ.
ಅಕ್ಷಯ್ ಕುಮಾರ್ ಅವರು ಈ ಸಿನಿಮಾದಲ್ಲಿ ಗೋರ್ಕಾ ರೆಜಿಮೆಂಟ್ ಸೈನಿಕನಾಗಿ ಅಭಿನಯಿಸುತ್ತಿದ್ದು, ಗೋರ್ಕಾ ಸೈನಿಕರು ತಮ್ಮ ಜೊತೆ ಕುಕ್ರಿ ಎಂಬ ಚಾಕು ರೀತಿಯ ಆಯುಧವನ್ನು ಇಟ್ಟುಕೊಂಡಿರುತ್ತಾರೆ. 'ಗೋರ್ಕಾ' ಸಿನಿಮಾದ ಪೋಸ್ಟರ್ನಲ್ಲೂ ಅದನ್ನು ತೋರಿಸಲಾಗಿದೆ. ಆದರೆ ಅಕ್ಷಯ್ ಕುಮಾರ್ ಹಿಡಿದುಕೊಂಡಿರುವುದು ಸರಿಯಾದ ಕುಕ್ರಿ ಅಲ್ಲ ಎಂದು ಮಾಜಿ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು ನೀವು ಈ ಸಿನಿಮಾ ಮಾಡುತ್ತಿರುವುದಕ್ಕೆ ಮಾಜಿ ಗೋರ್ಕಾ ಸೇನಾಧಿಕಾರಿಯಾದ ನಾನು ಧನ್ಯವಾದ ತಿಳಿಸುತ್ತೇನೆ. ಆದರೆ ವಿವರಗಳು ತುಂಬ ಮುಖ್ಯವಾಗುತ್ತವೆ. ದಯವಿಟ್ಟು ಸರಿಯಾದ ಕುಕ್ರಿ ತೆಗೆದುಕೊಳ್ಳಿ ಎಂದು ಮಾಜಿ ಸೇನಾಧಿಕಾರಿ ಟ್ವೀಟ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಅದಕ್ಕೆ ಪ್ರತಿಕ್ರಿಯಿಸಿ, ಇದನ್ನು ಕಂಡುಹಿಡಿದಿದ್ದಕ್ಕೆ ನಿಮಗೆ ಧನ್ಯವಾದಗಳು. ಚಿತ್ರೀಕರಣ ಮಾಡುವಾಗ ನಾವು ಹೆಚ್ಚು ಗಮನ ಹರಿಸುತ್ತೇವೆ. ಈ ಚಿತ್ರ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.