ಮುಂಬೈ, ಅ 16 (DaijiworldNews/MS): ಅಕ್ಟೋಬರ್ 2ರಿಂದ ಆರಂಭವಾಗಿರುವ ಬಾಲಿವುಡ್ ನ ಬಿಗ್ ಬಾಸ್ ಸೀಸನ್ 15 ಶುರುವಾಗಿ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತಿದೆ. ಈ ನಡುವೆ ಬಿಗ್ ಬಾಸ್ ನ ವಿಕೇಂಡ್ ಎಪಿಸೋಡ್ ನಲ್ಲಿ ನಡುವೆ ನಡೆದ ಸಂಭಾಷಣೆಯೊಂದು ಕರಾವಳಿಯ ಅಭಿಮಾನಿಗಳಿಗೆ ಖುಷಿ ನೀಡಿದೆ.
ಹೌದು ಬಿಗ್ ಬಾಸ್ ಸೀಸನ್ 15ರ ವೀಕೆಂಡ್ ಎಪಿಸೋಡ್ನಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹಾಗೂ ಸಲ್ಮಾನ್ ಖಾನ್ ತುಳು ಭಾಷೆಯಲ್ಲಿ ಮಾತನಾಡಿರುವುದು ಎಲ್ಲರ ಗಮನ ಸೆಳೆದಿದೆ.
ಇವರಿಬ್ಬರು ತುಳು ಮಾತನಾಡಿರುವ ವಿಡಿಯೋ ಕ್ಲಿಪ್ ಇದೀಗ ಸಖತ್ ವೈರಲ್ ಆಗುತ್ತಿದೆ. ‘ಹೇಗಿದ್ದೀರಿ?’, ‘ಚೆನ್ನಾಗಿದ್ದೇನೆ’ ಎಂಬ ಪದಗಳನ್ನು ತುಳು ಭಾಷೆಯಲ್ಲಿ ಹೇಗೆ ಹೇಳಬೇಕು ಎಂಬುದನ್ನ ಸಲ್ಮಾನ್ ಖಾನ್ಗೆ ಶಮಿತಾ ಶೆಟ್ಟಿ ಕಲಿಸಿಕೊಟ್ಟಿದ್ದಾರೆ. ತುಳು ಬರ್ಪುಂಡೆ, ಎಂಚ ಉಲ್ಲರ್ , ಸೌಖ್ಯ ಎಂಬ ಪದಗಳು ಇವರಿಬ್ಬರ ಮಾತುಕತೆಯಲ್ಲಿ ಕೇಳಿಬಂದಿದೆ.
ಶಿಲ್ಪಾ ಶೆಟ್ಟಿ ಕುಟುಂಬದವರು ಮೂಲತಃ ಮಂಗಳೂರಿನವರು. ಅವರ ಮಾತೃಭಾಷೆ ತುಳು. ಆದರೆ ಅವರು ವಾಸವಾಗಿರುವುದು ಮುಂಬೈನಲ್ಲಿ. ಎಷ್ಟೋ ವರ್ಷಗಳ ಹಿಂದೆಯೇ ಶಿಲ್ಪಾ, ಶಮಿತಾ ಮುಂಬೈ ಸೇರಿಕೊಂಡಿದ್ದರೂ ಕೂಡ ಅವರು ತುಳು ಮಾತನಾಡುವುದನ್ನು ಬಿಟ್ಟಿಲ್ಲ. ಅನೇಕ ವೇದಿಕೆಗಳಲ್ಲಿ ಶಿಲ್ಪಾ ತುಳು ಮಾತನಾಡಿದ್ದರು. ಈಗ ಶಮಿತಾ ಶೆಟ್ಟಿ ಕೂಡ ಬಿಗ್ ಬಾಸ್ನಲ್ಲಿ ಮಾತೃಭಾಷೆಯ ಅಭಿಮಾನ ಮೆರೆದಿದ್ದಾರೆ.