ಮಂಗಳೂರು, ಅ 06 (DaijiworldNews/MS): ‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಸಿನೆಮಾ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ಅವರ ಬಹು ನಿರೀಕ್ಷೆಯ ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನೆಮಾವು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ.
ಅಥರ್ವ ಪ್ರಕಾಶ್ (ಪ್ರಜ್ವಲ್)
ಸತ್ಯ ಪಿಕ್ಚರ್ಸ್, ಮಯೂರ ಪಿಕ್ಚರ್ಸ್ ಲಾಂಛನ ಮತ್ತು ಪುನೀತ್ ರಾಜ್ಕುಮಾರ್ ಅವರ ಪಿಆರ್ಕೆ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ ಸಿನಿಮಾದಲ್ಲಿ ಮಂಗಳೂರಿನ ಹುಡುಗ ಅಥರ್ವ ಪ್ರಕಾಶ್ (ಪ್ರಜ್ವಲ್) ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾವು ಒಟಿಟಿಯಲ್ಲಿ (ಅಮೆಜಾನ್ ಪ್ರೈಮ್)ನಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳಲ್ಲಿ ಕೆಲವು ಅದ್ದೂರಿ ಸಿನೆಮಾಗಳು ಚಿತ್ರಮಂದಿರದಲ್ಲಿ ಪಾರಮ್ಯ ಮೆರೆಯಲು ಮುಂದಾಗಿರುವ ಹೊತ್ತಿನಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಒಟಿಟಿಯಲ್ಲಿ ಪ್ರೇಕ್ಷಕರ ಮನರಂಜಿಸಲು ಮುಂದಾಗಿದೆ.
ಮಾನವೀಯ ಮೌಲ್ಯಗಳ ಕಥೆ ಹೊಂದಿರುವ ಈ ಚಿತ್ರದಲ್ಲಿ ಹೆಚ್ಚಿನವರು ಹೊಸಬರೇ ಆಗಿದ್ದಾರೆ. ನಟರಾಜ್, ಧರ್ಮಣ್ಣ ಮತ್ತು ವಾಸುಕಿ ವೈಭವ್ ಅವರ ಜತೆಯಲ್ಲಿ ಮಂಗಳೂರಿನ ಅಥರ್ವ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯೋಗರಾಜ್ ಭಟ್ರ ಗೀತೆಗಳಿಗೆ ವಾಸುಕಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಲವಾರು ತುಳು ಸಿನೆಮಾಗಳಲ್ಲಿ ತನ್ನ ನಟನಾ ಕೌಶಲವನ್ನು ಪ್ರದರ್ಶಿಸಿರುವ ಅಥರ್ವ ಪ್ರಕಾಶ್ ಸಿನೆಮಾ ರಂಗದಲ್ಲಿ ಭದ್ರವಾಗಿ ನೆಲೆಯೂರಲು ಯಶಸ್ವಿ ಹೆಜ್ಜೆಗಳನ್ನಿಡುತ್ತಿದ್ದಾರೆ.
ಈ ಸಿನೆಮಾವು ಕಂಠೀರವ ಸ್ಟುಡಿಯೋದಲ್ಲಿಯೇ ಚಿತ್ರೀಕರಣವಾಗಿದ್ದು, ಹಾಸ್ಯಕ್ಕೂ ಆದ್ಯತೆ ನೀಡಲಾಗಿದೆ. ಚಿತ್ರದ ಸೆಟ್ಗೆ ಬಂದು ಕಲಾವಿದರಿಗೆ ಶುಭ ಕೋರಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಪುನೀತ್ ಅವರು ಕೂಡ ಅಥರ್ವನ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ಅಥರ್ವನ ನಟನೆಯನ್ನು ನೋಡಿ ನಿರ್ದೇಶಕರೊಬ್ಬರು ಸ್ಥಳದಲ್ಲೇ ಬೇರೊಂದು ಸಿನೆಮಾಕ್ಕೆ ಸೇರಿಸಿಕೊಂಡಿದ್ದಾರೆ.
ತುಳು, ಕನ್ನಡ, ಮಲಯಾಳಂ, ತಮಿಳು, ಹಿಂದಿ, ಇಂಗ್ಲಿಷ್ ಮುಂತಾದ ಭಾಷೆಗಳಲ್ಲಿ ಸಮರ್ಥವಾಗಿ ವ್ಯವಹರಿಸಬಲ್ಲ ಅಥರ್ವ ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸಲು ಸೂಕ್ತ ಯುವ ನಟರಾಗಿದ್ದಾರೆ. ಯಾವುದೇ ಸನ್ನಿವೇಶವನ್ನು ಒಂದೇ ಟೇಕ್ನಲ್ಲಿ ನಿರ್ದೇಶಕರಿಂದ ಬೇಷ್ ಎನಿಸುವಷ್ಟು ಸಲೀಸಾಗಿ ಮಾಡುವ ಪ್ರತಿಭಾನ್ವಿತ ನಟರಾಗಿದ್ದಾರೆ. ‘ಚಾಲಿಪೋಲಿಲು’ ಸಿನೆಮಾದಲ್ಲಿ ಅದ್ಭುತ ನಟನೆ ತೋರಿ ಎಲ್ಲರ ಗಮನ ಸೆಳೆದಿದ್ದ ಅಥರ್ವ ಪ್ರಕಾಶ್ ಈಗ ಕನ್ನಡ ಹಾಗೂ ಇತರ ಭಾಷೆಗಳ ನಿರ್ದೇಶಕರ ಗಮನವನ್ನೂ ಸೆಳೆಯುತ್ತಿದ್ದಾರೆ. ಯಾವುದೇ ವಿಷಯವನ್ನು ಛಲದಿಂದ ಕಲಿತು ಅದರಲ್ಲಿ ಸಾಧಿಸಿ ತೋರುವಲ್ಲಿ ಅವರದ್ದು ಎತ್ತಿದ ಕೈ. ಜತೆಗೆ ಶಿಸ್ತು, ವಿನಯಶೀಲತೆ, ಹಿರಿಯರಿಗೆ ಗೌರವ ನೀಡುವುದು ಮುಂತಾದವು ಇವರ ಪ್ಲಸ್ ಪಾಯಿಂಟ್.
ಖಾಸಗಿತನ ಅನ್ನೋದೇ ಇಲ್ಲದ ಈ ಕಾಲದ ಕತೆಯನ್ನು ಸಿನಿಮಾ ಆಡಿಶನ್ ಹಿನ್ನೆಲೆಯಲ್ಲಿ ಹೇಳಲಿದ್ದೇವೆ. ಇಡೀ ಸಿನಿಮಾ ಸಹಜವಾಗಿಯೇ ಇರುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿದ್ದೇವೆ. ಇಡೀ ಸಿನಿಮಾದ ಚಿತ್ರೀಕರಣ ಒಂದೇ ಲೊಕೇಶನ್ನಲ್ಲಿ ಆಗಿದೆ. ಸ್ಕ್ರಿಪ್ಟ್ ವರ್ಕ್ನಿಂದ ಹಿಡಿದು ಶೂಟಿಂಗ್ ಮುಗಿಸೋವರೆಗೆ ದೊಡ್ಡ ಚಾಲೆಂಜ್ ಇತ್ತು. ನಮ್ಮ ನಿರೀಕ್ಷೆಗೂ ಮೀರಿ ಚಿತ್ರ ಚೆನ್ನಾಗಿ ಬಂದಿದೆ. ಎಂದು ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ತಿಳಿಸಿದ್ದಾರೆ.
ಸತ್ಯ ಪ್ರಕಾಶ್ ಸರ್ ಅವರ ಸಿನಿಮಾದಲ್ಲಿ ನಟಿಸಿರುವುದು ನನಗೊಂದು ವಿಶೇಷ ಅನುಭವ ನೀಡಿದೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಸಿನಿಮಾದ ಕತೆ, ನನ್ನ ಪಾತ್ರ ತುಂಬಾ ಚೆನ್ನಾಗಿದೆ ಎಂದು ನಟ ಅಥರ್ವ ಪ್ರಕಾಶ್ ತಿಳಿಸಿದ್ದಾರೆ.
ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಹುಡುಗ ಮಂಗಳೂರಿನವರು ಹಾಗೂ ಇವರು ನಟಿಸಿರುವ ಖ್ಯಾತ ಬ್ಯಾನರ್ನ ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದೆ. ಈ ಮಧ್ಯೆ ಮಲಯಾಳಂನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲೂ ಅಥರ್ವ ಮುಖ್ಯಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಸಂದೇಶ್ ಅವರ ಕಲಿಪುರುಷೆ ತುಳು ಸಿನಿಮಾದಲ್ಲೂ ಅಥರ್ವ ಯಾನೆ ಪ್ರಜ್ವಲ್ ನಟಿಸುತ್ತಿದ್ದಾರೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ನಾನ್ವೆಜ್ ಕನ್ನಡ ಸಿನಿಮಾ ಚಿತ್ರೀಕರಣ ಪೂರೈಸಿ ಬಿಡುಗಡೆಗೆ ಸಿದ್ಧವಾಗಿದೆ.