ಬೆಂಗಳೂರು, ಸೆ.21 (DaijiworldNews/HR): ಕನ್ನಡ ಚಿತ್ರರಂಗದಿಂದ ನಟಿ ರಶ್ಮಿಕಾ ಮಂದಣ್ಣ ವೃತ್ತಿಜೀವನ ಆರಂಭಿಸಿದ್ದು, ಬಳಿಕ ಅವರಿಗೆ ಬೇರೆ ಬೇರೆ ಭಾಷೆಯಿಂದ ಅನೇಕ ಆಫರ್ ಗಳು ಬಂದಿದ್ದು, ಇತ್ತೀಚೆಗಂತೂ ಅವರು ಯಾವುದೇ ಕನ್ನಡ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಯಾಕೆ ಹೀಗೆ ಎಂದು ಕೇಳಿದ ಪ್ರಶ್ನೆಗೆ ಕನ್ನಡ ಸಿನಿಮಾ ಮಾಡುವಷ್ಟು ಸಮಯ ನನ್ನ ಬಳಿ ಇಲ್ಲ ಎಂದು ನೇರವಾಗಿ ಉತ್ತರಿಸಿದ್ದಾರೆ.
ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತನಾಡಿದ್ದು, ತೆಲುಗು ಮತ್ತು ಹಿಂದಿ ಸಿನಿಮಾಗಳಿಗಾಗಿ ಡೇಟ್ಸ್ ಹೊಂದಿಸಲು ಅವರಿಗೆ ತುಂಬ ಕಷ್ಟ ಆಗುತ್ತಿದ್ದು, ಈ ಪ್ರಾಜೆಕ್ಟ್ಗಳಿಗಾಗಿಯೇ ಅವರು ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದು, ಕನ್ನಡ ಸಿನಿಮಾವನ್ನೂ ಮಾಡಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ರಶ್ಮಿಕಾ ಅಭಿನಯದ ಬಹುತೇಕ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದ್ದು, ಕನ್ನಡಕ್ಕೂ ಡಬ್ ಆಗುತ್ತಿವೆ. ಕರುನಾಡಿನಲ್ಲಿ ಇರುವ ಅವರ ಅಭಿಮಾನಿಗಳು ಡಬ್ಬಿಂಗ್ ವರ್ಷನ್ ನೋಡಿ ತೃಪ್ತಿಪಟ್ಟುಕೊಳ್ಳಬೇಕಷ್ಟೇ.
ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಎರಡು ಪ್ರಶಸ್ತಿ ಪಡೆದುಕೊಂಡಿದ್ದು, ಕನ್ನಡದ ‘ಯಜಮಾನ’ ಹಾಗೂ ತೆಲುಗಿನ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲಿನ ನಟನೆಗೆ ಅವರು 'ಅತ್ಯುತ್ತಮ ನಟಿ' ಕ್ರಿಟಿಕ್ಸ್ ಅವಾರ್ಡ್ ಪಡೆದುಕೊಂಡರು.