ಮುಂಬೈ, ಸೆ.15 (DaijiworldNews/PY): ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದು, ಮೊದಲ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಮೊದಲ ಬಾಲಿವುಡ್ ಸಿನಿಮಾ ಮಿಷನ್ ಮಜ್ನು ಚಿತ್ರದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಅವರಿಗೆ ರಶ್ಮಿತಾ ಅವರು ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರೀಕರಣ ಮುಗಿಸಿದ ಸಂತಸದಲ್ಲಿ ಮಿಷನ್ ಮಜ್ನು ಚಿತ್ರತಂಡದವರು ಕೇಕ್ ಕತ್ತರಿಸಿ ಭರ್ಜರಿ ಪಾರ್ಟಿ ಮಾಡಿದ್ದು, ಕೇಕ್ ಕತ್ತರಿಸುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡ ಹಂಚಿಕೊಂಡಿದೆ.
ಕೆಲವು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ರಶ್ಮಿಕಾ ಮಂದಣ್ಣ, "ಮಿಷನ್ ಮಜ್ನು ನನ್ನ ಮೊದಲ ಬಾಲಿವುಡ್ ಸಿನಿಮಾ. ನಾನು ಚಿತ್ರೀಕರಣದ ಸಂದರ್ಭ ಚಿತ್ರತಂಡದೊಂದಿಗೆ ಸಂತಸದ ಸಮಯ ಕಳೆದಿದ್ದೇನೆ. ಸ್ಕ್ರಿಪ್ಟ್ ಕೇಳಿದ್ದ ಮೊದಲ ದಿನವೇ ನಾನು ಈ ಚಿತ್ರದ ಭಾಗವಾಗಬೇಕು ಎಂದೆನಿಸಿತ್ತು" ಎಂದಿದ್ದರು.
ಇನ್ನು ರಶ್ಮಿಕಾ ಅವರು ಇನ್ನೊಂದು ಬಾಲಿವುಡ್ ಸಿನಿಮಾ ಗುಡ್ ಬೈ ಚಿತ್ರದಲ್ಲಿ ನಟಿಸಲು ಸಹಿಹಾಕಿದ್ದಾರೆ. ಕೆಲವೇ ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ಸಿನಿಮಾವನ್ನು ಶಂತನು ಬಾಗ್ಚಿ ನಿರ್ದೇಶನ ಮಾಡಿದ್ದು, ಝಾಕಿರ್ ಹುಸೇನ್ ಸೇರಿದಂತೆ ಶರೀಬ್ ಹಷ್ಮಿ, ಪರ್ಮಿರ್ ಸೇಠಿ ಹಾಗೂ ಹಲವರು ನಟಿಸಿದ್ದಾರೆ.
ರೂನಿ ಸೋಲಿ, ಅಮರ್ ಬುಟಾಲಾ ಹಾಗೂ ಗರಿಮಾ ಮೆಹ್ತಾ ಅವರು ಮಿಷನ್ ಮಜ್ನು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.