ಮುಂಬೈ, ಆ 25 (DaijiworldNews/PY): ನಟ ಸಲ್ಮಾನ್ ಖಾನ್ ಅವರನ್ನು ಕಳೆದ ವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದು ಪರಿಶೀಲನೆ ನಡೆಸಿದ್ದ ಸಿಐಎಸ್ಎಫ್ ಅಧಿಕಾರಿಗೆ ಬಹುಮಾನ ನೀಡಲಾಗಿದೆ.
ಈ ಬಗ್ಗೆ ಸಿಐಎಸ್ಎಫ್ ಟ್ವೀಟ್ ಮಾಡಿದ್ದು, "ಅಧಿಕಾರಿಯ ವೃತ್ತಿಪರತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಅವರಿಗೆ ಸೂಕ್ತ ಬಹುಮಾನ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಅವರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ ಅಧಿಕಾರಿಗೆ ದಂಡ ವಿಧಿಸಲಾಗಿದೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದ್ದವು. ಈ ವಿಚಾರವನ್ನು ಅಲ್ಲಗಳೆದಿರುವ ಸಿಐಎಸ್ಎಫ್, "ಅಧಿಕಾರಿಯ ವೃತ್ತಿಪರತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮೆಚ್ಚಿ ಅವರಿಗೆ ಸೂಕ್ತ ಬಹುಮಾನ ನೀಡಲಾಗಿದೆ" ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರು ಟೈಗರ್-3 ಸಿನಿಮಾ ಚಿತ್ರೀಕರಣಕ್ಕಾಗಿ ರಷ್ಯಾಗೆ ಹೊರಟಿದ್ದರು. ಈ ವೇಳೆ ವಿಮಾನ ನಿಲ್ದಾಣದ ಪ್ರವೇಶದ್ವಾರದ ಬಳಿ ಸಲ್ಮಾನ್ ಖಾನ್ ಅವರನ್ನು ಎಎಸ್ಐ ಸೀಮನಾಥ್ ಮೊಹಂತಿ ಅವರು ತಡೆದು, ಭದ್ರತಾ ಪರಿಶೀಲನೆ ನಡೆಸಿದ್ದರು.
ಟೈಗರ್-3 ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಾಗಲೇ ಮುಂಬೈನಲ್ಲಿ ಮುಕ್ತಾಯವಾಗಿದೆ. ಕತ್ರಿನಾ ಕೂಡಾ ಇದರಲ್ಲಿ ಭಾಗಿಯಾಗಿದ್ದರು.
ಇದೀಗ ಟೈಗರ್-3 ಸಿನಿಮಾ ತಂಡ ರಷ್ಯಾ, ಆಸ್ಟ್ರೀಯಾ ಹಾಗೂ ಟರ್ಕಿಯಲ್ಲಿ ಚಿತ್ರೀಕರಣ ನಡೆಸಲು ಸಿದ್ದತೆ ಮಾಡಿಕೊಂಡಿದೆ. ಆ.18ರಂದು ಪ್ರಯಾಣ ಬೆಳೆಸಿರುವ ಚಿತ್ರ ತಂಡ 45 ದಿನಗಳ ಕಾಲ ವಿದೇಶಗಳಲ್ಲಿ ತಂಗಲಿದೆ.
ಟೈಗರ್-3 ಸಿನಿಮಾವನ್ನು ಮನೀಶ್ ಶರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.