ಕಾರ್ಕಳ, ಆ.16 (DaijiworldNews/HR): ಸಾಮಾಜಿಕ ಜಾಗೃತಿ ಮೂಡಿಸುವ 'ದ ಮೋರಲ್ ಎಥಿಕ್' ಕಿರುಚಿತ್ರ ಪೆರ್ವಾಜೆ ಮೂಕಾಂಬಿಕಾ ದತ್ತಾತ್ರೇಯ ಶ್ರೀ ಕ್ಷೇತ್ರದ ಸನ್ನಿಧಾನದಲ್ಲಿ ಇಂದು ಬಿಡುಗಡೆಗೊಂಡಿತು.
ದ ಮೋರಲ್ ಎಥಿಕ್' ಕಿರುಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಪೆರ್ವಾಜೆ ಶ್ರೀ ಮೂಕಾಂಬಿಕಾ ದತ್ತಾತ್ರೇಯ ದೇವಸ್ಥಾನದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ , "ದೃಶ್ಯ ಕಲೆಯಿಂದ ಮನಸ್ಸಿನ ಪರಿವರ್ತನೆ ಸಾಧ್ಯ. ಸಾಮಾಜಿಕ ಕಳಕಳಿಯ ನೀತಿಯುಕ್ತ ಚಲನ ಚಿತ್ರ -ಕಿರು ಚಿತ್ರಗಳು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಾಗ ಸಾಮಾಜಿಕ ಸ್ವಾಸ್ಥತೆ ಕಾಪಾಡಲು ಸಾಧ್ಯ" ಎಂದರು.
ಕಿರುಚಿತ್ರದ ನಿರ್ದೇಶಕ ಚಂದ್ರನಾಥ ಬಜಗೋಳಿ ಮಾತನಾಡಿ, "ಕ್ಷಣದಲ್ಲಿ ವೀಕ್ಷಿಸುವ ದೃಶ್ಯಾವಳಿ ಅಥವಾ ಶ್ಯಾವ್ಯವಾಗಿ ಕೇಳುವ ಮಾತುಗಳು ಬದುಕನ್ನೇ ಬದಲಾಯಿಸುವ ಶಕ್ತಿ ಅಡಕವಾಗಿದೆ. ಎರಡುವರೆ ನಿಮಿಷದ ಈ ಕಿರುಚಿತ್ರ ಆಳವಾದ ಸಂದೇಶವನ್ನು ನೀಡುತ್ತದೆ ಮತ್ತೆ ಮತ್ತೆ ನೋಡಿಸುವ ಈ ಕಿರುಚಿತ್ರವನ್ನು ನಾವೆಲ್ಲಾ ಆಸ್ವಾದಿಸೋಣ" ಎಂದಿದ್ದಾರೆ.
ನಿರ್ಮಾಪಕ ಸದಾಶಿವ ಶೆಟ್ಟಿ ಪೆರ್ವಾಜೆ, ನಟರಾದ ಉಮೇಶ್ ರಾವ್, ಸಂದೇಶ್ ಪಿ.ಕೆ., ನಮ ತುಳುವೆರ್ ಕಲಾ ಸಂಘಟನೆಯ ಸುಕುಮಾರ್ ಮೋಹನ್, ಛಾಯಾಗ್ರಾಹಕ ಹರಿಶ್ ಪವಾರ್ ಮುಂತಾದವರು ಉಪಸ್ಥಿತರಿದ್ದರು. ಚಂದ್ರನಾಥ ಬಜಗೋಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ದೇವದಾಸ್ ಕೆರೆಮನೆ ನಿರೂಪಿಸಿದರು.