ಮುಂಬೈ, ಆ.03 (DaijiworldNews/HR): ಸಾಮಾಜಿಕ ಕೆಲಸಗಳ ಮೂಲಕ ರಿಯಲ್ ಹೀರೋ ಆಗಿರುವ ಬಾಲಿವುಡ್ ನಟ ಸೋನು ಸೂದ್ ಅವರು ಭಾರತದ ಪ್ರಧಾನಿಯಾಗಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದು, ತನ್ನ ಫ್ಯಾನ್ಸ್ ಗಳ ಈ ಬಯಕೆಗೆ ನಗುತ್ತಲೆ ಉತ್ತರಿಸಿರುವ ಸೋನು, ನಾನು ರಾಜಕೀಯಕ್ಕೆ ಬರೋಲ್ಲ ಎಂದು ಹೇಳಿದ್ದಾರೆ.
ಮಾಹಿತಿ ಪ್ರಕಾರ ರಾಜ್ಯ ಸರ್ಕಾರವೊಂದು (ಹೆಸರು ಬಹಿರಂಗವಾಗಿಲ್ಲ) ಸೋನು ಸೂದ್ ಅವರಿಗೆ ರಾಜ್ಯಸಭಾ ಸ್ಥಾನ ನೀಡಲು ಮುಂದಾಗಿದೆಯಂತೆ. ಈ ಕುರಿತು ಈ ನಟನ ಜೊತೆ ಮಾತುಕತೆ ಕೂಡ ನಡೆಸಿದೆಯಂತೆ. ಆದರೆ, ಸೋನು ಮಾತ್ರ ತನ್ನನ್ನು ಹುಡುಕಿಕೊಂಡು ಬಂದ ಅವಕಾಶವನ್ನು ನಯವಾಗಿಯೆ ತಿರಸ್ಕರಿಸಿದ್ದಾರಂತೆ. ತನ್ನನ್ನು ರಾಜಕೀಯಕ್ಕೆ ಕರೆತರಲು ಇಚ್ಛಿಸಿದ ಸರ್ಕಾರಕ್ಕೆ ಧನ್ಯವಾದ ಹೇಳಿರುವ ಅವರು, ನಾನು ಸಕ್ರಿಯ ರಾಜಕಾರಣಕ್ಕೆ ಬರುವುದಿಲ್ಲ ಎಂದಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಕೊರೊನಾದ ಮೊದಲ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಹೇರಲಾದ ಲಾಕ್ ಡೌನ್ ವೇಳೆ ಸೋನು ಸೂದ್ ಮಾಡಿದ ಕಾರ್ಯಗಳನ್ನು ಕಂಡು ಸೋನು ಸೂದ್ ರಾಜಕೀಯಕ್ಕೆ ಬಂದರೆ ಮತ್ತಷ್ಟು ಒಳ್ಳೆಯ ಕೆಲಸಗಳು ಆಗಬಹುದು ಎನ್ನುವುದು ಅವರ ಬೆಂಬಲಿಗರ ಉದ್ದೇಶವಾಗಿದೆ.
ಇನ್ನು ಸೋನು ಅವರು ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.