ಮುಂಬೈ, ಜು.30 (DaijiworldNews/HR): ನಟಿ ಶಕೀಲಾ ಅವರು ತಮ್ಮ ಕುರಿತು ಹರಡಿರುವ ಅನಾರೋಗ್ಯ ಮತ್ತು ಸಾವಿನ ವದಂತಿಯ ಬಗ್ಗೆ ಜುಲೈ 29ರಂದು ವಿಡಿಯೋ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶಕೀಲಾ ಸಾವಿನ ಬಗ್ಗೆ ವದಂತಿ ಹರಿದಾಡಿದ್ದು, ಸಾಕಷ್ಟು ಮಂದಿ ಶೇರ್ ಮಾಡಿಕೊಂಡು ಸಂತಾಪವನ್ನು ಸೂಚಿಸಿದ್ದು, ಇದರ ಬೆನ್ನಲ್ಲೇ ಸಾವಿನ ವಿಚಾರ ಶಕೀಲಾ ಅವರ ಕಿವಿಗೆ ಬಿದ್ದು ವಿಡಿಯೋ ಮೂಲಕ ಸಂದೇಶವನ್ನು ರವಾನಿಸಿದ್ದಾರೆ.
ಇನ್ನು ನನ್ನ ಸಾವಿನ ಕುರಿತಾದ ಸುದ್ದಿಯನ್ನು ಕೇಳಿದೆ. ಆ ರೀತಿ ಏನೂ ನಡೆದಿಲ್ಲ. ನನಗೇನು ಆಗಿಲ್ಲ. ನಾನು ಆರೋಗ್ಯದಿಂದ ಸಂತೋಷವಾಗಿದ್ದೇನೆ. ನನ್ನ ಬಗ್ಗೆ ಕೆಲವರು ತಪ್ಪು ಸುದ್ದಿಯನ್ನು ಹರಿಬಿಟ್ಟಿದ್ದಾರೆ. ನನ್ನ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಧನ್ಯವಾದಗಳು. ನನ್ನ ಸಾವಿನ ಬಗ್ಗೆ ನಕಲಿ ಸುದ್ದಿ ಹರಿಬಿಟ್ಟು ನನ್ನ ಬಗ್ಗೆ ಜನರು ಚಿಂತಿಸುವಂತೆ ಮಾಡಿದ ವ್ಯಕ್ತಿಗೂ ಸಹ ಧನ್ಯವಾದಗಳು ಎಂದು ಶಕೀಲಾ ಹೇಳಿದ್ದಾರೆ.