ಮುಂಬೈ, ಜು 20 (DaijiworldNews/HR): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಹಂಚುವಿಕೆಯ ಆರೋಪದ ಮೇಲೆ ಸೋಮವಾರ ಮುಂಬೈನಲ್ಲಿ ಬಂಧಿಸಲಾಗಿದ್ದು, ಅವರ ಬಂಧನದ ಬಳಿಕ ನಟಿ, ರೂಪದರ್ಶಿ ಸಾಗರಿಕಾ ಶೋನಾ ಅವರು ನೀಡಿರುವ ಸಂದರ್ಶನವೊಂದು ವೈರಲ್ ಆಗಿದೆ.
ಈ ಸಂದರ್ಶನದಲ್ಲಿ ಸಾಗರಿಕಾ ಅವರು ತಾವು ರಾಜ್ ಕುಂದ್ರಾ ಅವರಿಗೆ ಸೇರಿದ ನಿರ್ಮಾಣ ಸಂಸ್ಥೆಗೆ ಆಡಿಶನ್ ಕೊಡುವಾಗ ರಾಜ್ ನಗ್ನವಾಗಿ ಕಾಣಿಸಿಕೊಳ್ಳಲು ಹೇಳಿದ್ದರು ಎಂದು ಆರೋಪಿಸಿದ್ದಾರೆ.
ಸಾಗರಿಕಾ ಶೋನಾ ಅವರು ತಮಗಾದ ಅನುಭವವನ್ನು ಹೇಳಿದ್ದು, "2020ರ ಆಗಸ್ಟ್ನಲ್ಲಿ ಮೊದಲ ಲಾಕ್ಡೌನ್ ಸಂದರ್ಭದಲ್ಲಿ ಉಮೇಶ್ ಕಾಮತ್ ಅವರಿಂದ ಒಂದು ಕರೆ ಬಂದಿದ್ದು, ಅವರು ರಾಜ್ ಕುಂದ್ರಾ ನಿರ್ಮಾಣದ ವೆಬ್ ಸಿರೀಸ್ನಲ್ಲಿ ಪಾತ್ರವೊಂದನ್ನು ಮಾಡುವಂತೆ ಆಹ್ವಾನ ನೀಡಿದರು. ನಾನಾಗ ರಾಜ್ ಕುಂದ್ರಾ ಯಾರೆಂದು ಕೇಳಿದ್ದಕ್ಕೆ- ಶಿಲ್ಪಾ ಶೆ್ಟ್ಟಿ ಪತಿ ಎಂದು ಉಮೇಶ್ ಹೇಳಿದ್ದರು.
ಇನ್ನು ಒಂದು ವೇಳೆ ನೀವು ಈ ಆಹ್ವಾನ ಒಪ್ಪಿದರೆ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಹೋಗುವಿರಿ ಎಂಬ ಭರವಸೆಯನ್ನೂ ನೀಡಿದ್ದರು. ಆದ್ದರಿಂದಲೇ ಆಡಿಶನ್ಗೆ ಒಪ್ಪಿಕೊಂಡೆ. ಆದರೆ ಕೊರೊನಾದಿಂದ ಆಡಿಶನ್ ಹೇಗೆ ಕೊಡುವುದು ಎಂದು ಕೇಳಿದಾಗ, ವಿಡಿಯೊ ಕಾಲ್ ಮುಖಾಂತರ ಕೊಡಬಹುದು ಎಂದರು. ಯಾವಾಗ ನಾನು ವಿಡಿಯೊ ಕಾಲ್ನಲ್ಲಿ ಜಾಯ್ನ್ ಆದೆನೋ ಆಗ ಅವರು ನಗ್ನವಾಗಿ ಆಡಿಶನ್ ನೀಡಲು ಹೇಳಿದರು. ನನಗೆ ಶಾಕ್ ಆಗಿ, ಖಡಾಖಂಡಿತವಾಗಿ ನಿರಾಕರಿಸಿದೆ. ವಿಡಿಯೊ ಕಾಲ್ನಲ್ಲಿ ಮೂವರಿದ್ದರು. ಅದರಲ್ಲಿ ಮುಖವನ್ನು ಮುಚ್ಚಿಕೊಂಡಿದ್ದ ಒಬ್ಬರು ರಾಜ್ ಕುಂದ್ರಾ ಎಂಬ ಅನುಮಾನ ನನಗಿದೆ" ಎಂದು ಗಂಭೀರ ಆರೋಪ ಮಾಡಿದ್ದರು.
ಸಾಗರಿಕಾ ಹೆಸರಿಸಿರುವ ಉಮೇಶ್ ಕಾಮತ್ ಅವರನ್ನು ಫೆಬ್ರವರಿ 9ರಂದು ಪೊಲೀಸರು ಬಂಧಿಸಿದ್ದು, ಅವರು ರಾಜ್ ಕುಂದ್ರಾ ಅವರ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದರು. ಅಶ್ಲೀಲ ದೃಶ್ಯಗಳ ತಯಾರಿಕೆ ಮತ್ತು ಹಂಚಿಕೆಯ ಆರೋಪದಲ್ಲಿಯೇ ಉಮೇಶ್ ಕಾಮತ್ ಬಂಧನವಾಗಿದ್ದು, ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಇದುವರೆಗೆ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.