ಮುಂಬೈ, ಜು 14 (DaijiworldNews/PY): ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಸಾಮಾಜಿ ಜಾಲತಾಣದಲ್ಲಿ ಮಗನ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿರುವ ಅವರು, "ನಮ್ಮ ಪುತ್ರ ಅವ್ಯಾನ್ ಆಜಾದ್ ರೇಖಿ ಹುಟ್ಟಿದ್ದು ಮೇ 14ರಂದು. ಅವಧಿಗೂ ಮುನ್ನ ಜನಿಸಿರುವ ಮಗುವನ್ನು ನರ್ಸ್ಗಳು ಹಾಗೂ ವೈದ್ಯರು ನಿಯೋನೇಟಲ್ ಐಸಿಯುನಲ್ಲಿ ಜಾಗ್ರತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಗರ್ಭಾವಸ್ಥೆಯಲ್ಲಿ ಹಠಾತ್ತಾಗಿ ಮಾಡಲಾದ ಅಪೆನ್ಡೆಕ್ಟೊಮಿ ಹಾಗೂ ಅದರಿಂದ ಉಂಟಾದ ತೀವ್ರ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ನಿಂದ ಜೀವಕ್ಕೆ ಅಪಾಯವಿತ್ತು. ಅದೃಷ್ಟವಶಾತ್, ವೈದ್ಯರ ಸಮಯೋಚಿತ ಆರೈಕೆಯಿಂದ ಹಾಗೂ ಎಮೆರ್ಜೆನ್ಸಿ ಸಿ-ಸೆಕ್ಷನ್ ಮೂಲಕ ನನಗೆ ಹೆರಿಗೆ ಮಾಡಲಾಯಿತು" ಎಂದಿದ್ದಾರೆ.
"ಈವರೆಗೆ ನನ್ನನ್ನು ಕೇರ್ ಮಾಡಿದ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.
ಇದೇ ಫೆಬ್ರವರಿ 15ರಂದು ದಿಯಾ ಮಿರ್ಜಾ ವೈಭವ್ ರೇಖಿಯನ್ನು ವಿವಾಹವಾಗಿದ್ದರು. ವಿಮಾಹಕ್ಕೆ ಕೇವಲ ಆಪ್ತರು ಹಾಗೈ ಕುಟುಂಬದ ಸದಸ್ಯರಿಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು. ವಿವಾಹ ಮುಗಿಯುತ್ತಿದ್ದಂತೆಯೇ ದಿಯಾ ಮಿರ್ಜಾ ಅವರು ತಮ್ಮ ಪತಿಯೊಂದಿಗೆ ಮಾಲ್ಡೀವ್ಸ್ಗೆ ಹನಿಮೂನ್ಗೆ ತೆರಳಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕ ತಾವು ಗರ್ಭಿಣಿ ಎನ್ನುವುದನ್ನು ತಿಳಿಸಿದ್ದರು.
ಇದು ದಿಯಾ ಮಿರ್ಜಾ ಅವರಿಗೆ ಎರಡನೇ ವಿವಾಹವಾಗಿದೆ. ದಿಯಾ ಮಿರ್ಜಾ ಅವರು 2014ರಲ್ಲಿ ಉದ್ಯಮಿ ಸಾಹುಲ್ ಸಂಘ ಅವರನ್ನು ವಿವಾಹವಾಗಿದ್ದರು. ಆದರೆ, ಐದೇ ವರ್ಷದಲ್ಲಿ ವಿವಾಹ ಮುರಿದುಬಿದ್ದು, 2019ರಲ್ಲಿ ವಿಚ್ಛೇದನವಾಗಿತ್ತು. ವೈಭವ್ ರೇಖಿಗೂ ಇದು ಎರಡನೇ ವಿವಾಹವಾಗಿದ್ದು, ಮೊದಲ ಪತ್ನಿಗೆ ಮಗಳಿದ್ದಾಳೆ.