ಬೆಂಗಳೂರು, ಜು.10 (DaijiworldNews/HR): ಕೊರೊನಾ ಲಸಿಕೆ ಪ್ರಕ್ರಿಯೆ ಭಾರತದಾದ್ಯಂತ ಭರದಿಂದ ಸಾಗಿದ್ದು, ನಾನು ಭಾರತದ ಲಸಿಕೆ ಪಡೆಯುವುದಿಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ.
ಕಾಮಿಡಿಯನ್ ಸೋನು ವೇಣುಗೋಪಾಲ್ ಅವರೊಂದಿಗೆ ನಟಿ ರಮ್ಯಾ ಲೈವ್ ಬಂದಿದ್ದು, ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ರಮ್ಯಾಗೆ ಸೋನು ನೀವು ವ್ಯಾಕ್ಸಿನ್ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಇದಕ್ಕೆ ರಮ್ಯಾ ಇಲ್ಲ ಎಂದು ಉತ್ತರಿಸಿರುವುದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.
ಇನ್ನು "ನಾನು ಅಮೇರಿಕಾದ ಕೊರೊನಾ ವ್ಯಾಕ್ಸಿನ್ ಮೊಡೆರ್ನಾಗೆ ಕಾಯುತ್ತಿದ್ದೇನೆ. ಫೈಜರ್ ವ್ಯಾಕ್ಸಿನ್ನ್ನು ಮೂರು ಡೋಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಶುರುವಾಗಿದೆ. ಮೊಡೆರ್ನಾಗೆ ಸದ್ಯ ವಿಶ್ವಸಂಸ್ಥೆ ಅನುಮತಿ ನೀಡಿದ್ದು, ನನಗೆ ಅದು ಖುಷಿಯ ವಿಚಾರವಾಗಿದೆ ಎಂದಿದ್ದಾರೆ.
ದೇಶದಲ್ಲಿ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಲಸಿಕೆ ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಅಭಿಮಾನಿಗಳ ಬಳಿ ಲಸಿಕೆ ಪಡೆಯುವಂತೆ ಕೋರುತ್ತಿದ್ದಾರೆ. ಆದರೆ, ನಟಿ ರಮ್ಯಾ ಮಾತ್ರ ಈ ವಿಚಾರದಲ್ಲಿ ಬೇರೆ ಮಾರ್ಗ ಅನುಸರಿಸಿದ್ದಾರೆ ಎನ್ನಲಾಗಿದೆ.