ಬೆಂಗಳೂರು, ಜು 07 (DaijiworldNews/PY): ಅಮೃತಮತಿ ಸಿನಿಮಾಗೆ ಮತ್ತೊಂದು ಅಂತರಾಷ್ಟ್ರೀಯ ಮನ್ನಣೆ ದೊರೆತಿದ್ದು, ಅಮೃತಮತಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಹರಿಪ್ರಿಯಾ ಅವರಿಗೆ ಹಾಲಿವುಡ್ ಅಂತರಾಷ್ಟ್ರೀಯ ಗೋಲ್ಡನ್ ಏಜ್ ಫೆಸ್ಟಿವಲ್ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಈ ಮೊದಲು ಅಮೃತಮತಿ ಚಿತ್ರಕ್ಕೆ ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ವಿದೇಶಿ ಭಾಷೆಯ ಚಿತ್ರವೆಂಬ ಪ್ರಶಸ್ತಿ ಲಭಿಸಿತ್ತು. ಲಾಸ್ ಏಂಜಲೀಸ್ ಸನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಶ್ರೇಷ್ಠ ಚಿತ್ರ ಮತ್ತು ಬರಗೂರ್ ಅವರಿಗೂ ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಲಭಿಸಿತ್ತು. ಇದೀಗ ಈ ಚಿತ್ರಕ್ಕೆ ಮತ್ತೊಂದು ಪ್ರಶಸ್ತಿ ಲಭಿಸಿದೆ. ಈವರೆಗೆ ಈ ಚಿತ್ರ 10ಕ್ಕೂ ಅಧಿಕ ಅಂತರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ.
ಅಮೃತಮತಿ ಚಿತ್ರವು ಕನ್ನಡದ ಪ್ರಾಚೀನ ಕೃತಿಯಾದ ಯಶೋಧರ ಚರಿತೆಯ ಪ್ರಸಂಗವನ್ನು ಆಧರಿಸಿ ಮರುವ್ಯಾಖ್ಯಾನಗೊಂಡ ಚಿತ್ರ ಎನ್ನುವುದು ವಿಶೇಷವಾಗಿದೆ.
ಬರಗೂರು ರಾಮಚಂದ್ರಪ್ಪ ಅವರು ಚಿತ್ರಕತೆ, ಸಂಭಾಷಣೆ, ಗೀತೆರಚನೆ ಮಾಡಿ ನಿರ್ದೇಶಿಸಿರುವ ಅಮೃತಮತಿ ಸಿನಿಮಾದಲ್ಲಿ ಪ್ರಶಸ್ತಿ ಪುರಸ್ಕೃತ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಸಂಕಲನಕಾರರಾಗಿ ಸುರೇಶ್ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಶಮಿತಾ ಮಲ್ನಾಡ್ ಕಾರ್ಯ ನಿರ್ವಹಿಸಿದ್ದಾರೆ. ಇಂಚರ ಪ್ರೊಡಕ್ಷನ್ನಲ್ಲಿ ಪುಟ್ಟಣ್ಣ ನಿರ್ಮಾಣ ಮಾಡಿದ್ದಾರೆ.
ಯಶೋಧರನ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಸುಂದರರಾಜ್, ಪ್ರಮೀಳಾ ಜೋಷಾಯ್ ತಿಲಕ್, ಸುಪ್ರಿಯಾರಾವ್, ವತ್ಸಲಾಮೋಹನ್, ಅಂಬರೀಷ್ ಸಾರಂಗಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.