ಮುಂಬೈ, ಜು 03 (DaijiworldNews/PY): ಬಾಲಿವುಡ್ ನಟ ಅಮೀರ್ ಖಾನ್ ಅವರು ಪತ್ನಿ ಕಿರಣ್ ರಾವ್ ಅವರೊಂದಿಗೆ ವಿಚ್ಛೇದನ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ದಂಪತಿಗಳ ದಾಂಪತ್ಯ ಜೀವನಕ್ಕೆ ಇದೀಗ 15 ವರ್ಷಗಳಾಗಿದ್ದು, ಇವರಿಗೆ ಆಜಾದ್ ಖಾನ್ ರಾವ್ ಎಂಬ ಮಗನಿದ್ದಾನೆ.
"15 ವರ್ಷಗಳಲ್ಲಿ ನಾವು ಜೀವನಪರ್ಯಂತ ಸಂತೋಷ, ನಗು ಹಾಗೂ ಅನುಭವಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ಗೌರವ, ನಂಬಿಕೆ ಹಾಗೂ ಪ್ರೀತಿಯಲ್ಲಿ ಮಾತ್ರವೇ ಬೆಳೆದಿದೆ. ಇದೀಗ ನಾವಿಬ್ಬರೂ ಜೀವನದಲ್ಲಿ ಹೊಸದಾದ ಅಧ್ಯಾಯವನ್ನು ಆರಂಭಿಸಲು ಇಚ್ಛಿಸಿದ್ದೇವೆ. ಇನ್ನು ಮುಂದೆ ನಾವು ಸಹ ಪೋಷಕರು ಹಾಗೂ ಕುಟುಂಬವಾಗಿ ಉಳಿಯಲು ಬಯಸುತ್ತೇವೆ" ಎಂದು ಅಮೀರ್ ಖಾನ್ ಅವರು ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾವು ನಮ್ಮ ಮಗ ಆಜಾದ್ ರಾವ್ ಖಾನ್ಗೆ ಸಹ ಪೋಷಕರಾಗಿರಲಿದ್ದು, ಆತನನ್ನು ಪೋಷಿಸುತ್ತೇವೆ ಹಾಗೂ ಬೆಳೆಸುತ್ತೇವೆ. ನಾವು ಪೌನಿ ಫೌಂಡೇಶನ್ ಯೋಜನೆಗಳಲ್ಲಿ ಸಹಯೋಗಿಗಳಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ" ಎಂದಿದ್ದಾರೆ.
"ನಮ್ಮ ಸಂಬಂಧದಲ್ಲಿ ವಿಕಾಸದ ವಿಚಾರವಾಗಿ ನಮ್ಮ ಕುಟುಂಬಗಳು ಹಾಗೂ ಸ್ನೇಹಿತರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು. ಅವರಿಲ್ಲದಿದ್ದರೆ, ನಾವು ಈ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ. ನಮ್ಮ ಹಿತೈಷಿಗಳ ಶುಭ ಹಾರೈಕೆಗಳು ಹಾಗೂ ಆಶೀರ್ವಾದಗಳಿಗಾಗಿ ನಾವು ವಿನಂತಿಸುತ್ತೇವೆ. ನೀವು ನಮ್ಮಂತೆ ಈ ವಿಚ್ಛೇದನವನ್ನು ಅಂತ್ಯವಾಗಿ ನೋಡುವುದಿಲ್ಲ. ಅಂದರೆ, ಹೊಸ ಪ್ರಯಾಣದ ಆರಂಭವೆಂದು ಕಾಣುತ್ತೀರಿ ಎಂದು ಆಶಿಸುತ್ತೇನೆ" ಎಂದು ಅಮೀರ್ ಖಾನ್ ಹಾಗೂ ಕಿರಣ್ ಇಬ್ಬರೂ ಸಹಿ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.