ಮುಂಬೈ, ಜು. 01(DaijiworldNews/HR): ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಇದೀಗ ನಟಿ ಗರ್ಭಿಣಿಯಾಗಿದ್ದಾಗ ತೊಟ್ಟ ಬಟ್ಟೆಗಳನ್ನು ಹರಾಜಿಗಿಡುವ ಮೂಲಕ ಸುದ್ದಿಯಾಗಿದ್ದಾರೆ.
ನಟಿ ಅನುಷ್ಕಾ ಶರ್ಮಾ ಸದ್ಯ ತಮ್ಮ ಹೆಣ್ಣು ಮಗುವಿನ ಆರೈಕೆಯಲ್ಲಿದ್ದು, ತಮ್ಮ ಗರ್ಭಿಣಿಯಾಗಿದ್ದಾಗದ ಬಟ್ಟೆಗಳನ್ನು ಆನ್ ಲೈನ್ ಮೂಲಕ ಹರಾಜಿಗಿಟ್ಟು, ಈ ಮೂಲಕ ಬಟ್ಟೆಗಳ ಮರು ಬಳಕೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ.
ಬಟ್ಟೆಗಳ ಮರು ಬಳಕೆ ಮಾಡುವುದನ್ನು ಸರ್ಕುಲರ್ ಫ್ಯಾಷನ್ ಟ್ರೆಂಡ್ ಎಂದು ಕರೆದಿರುವ ಅನುಷ್ಕಾ ಶರ್ಮಾ ತಾಯಿಯ ಆರೋಗ್ಯನ್ನು ಬೆಂಬಲಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ತಾವು ಬಳಸುವ ವಸ್ತುಗಳನ್ನು ಮತ್ತೆ ಬಳಕೆ ಮಾಡುವ ಟ್ರೆಂಡ್ ಅನುಸರಿಸಿದರೆ ನಮ್ಮ ಪರಿಸರದ ಮೇಲೆ ಇದು ದೊಡ್ಡ ಪರಿಣಾಮ ಬೀರಬಹುದು. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಈ ಹಂತವು ತುಂಬಾ ಮುಖ್ಯವಾದುದಾಗಿದ್ದು, ನಾವೆಲ್ಲರೂ ಒಟ್ಟು ಸೇರಿ ಈ ಕಾರ್ಯವನ್ನು ಆರಂಭಿಸಿಸೋಣ ಎಂದು ಕರೆ ನೀಡಿರುವ ಅನುಷ್ಕಾ, ಗರ್ಭಿಣಿ ಹೆಣ್ಣುಮಕ್ಕಳ ಆರೋಗ್ಯಕ್ಕಾಗಿ ಕೆಲಸ ಮಾಡುವ ಸ್ನೇಹಾ ಸ್ವಯಂಸೇವಾ ಸಂಸ್ಥೆಗೆ ದಾನ ಮಾಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಇನ್ಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಅವರು, "ಭಾರತದಲ್ಲಿನ ಗರ್ಭಿಣಿಯರ ಪೈಕಿ ಶೇ.1ರಷ್ಟು ಮಹಿಳೆಯರು ಮಾತ್ರ ತಮ್ಮ ಬಟ್ಟೆಗಳನ್ನು ಮರು ಬಳಕೆ ಮಾಡಬಲ್ಲರು. ಗರ್ಭಿಣಿಯರ ಬಟ್ಟೆ ಖರೀದಿ ಮಾಡಿದರೆ ನೀರಿನ ಉಳಿತಾಯ ಮಾಡಬಹುದು. ಈ ಮೂಲಕ ಪರಿಸರದಲ್ಲಿ ನಾವು ದೊಡ್ಡ ಬದಲಾವಣೆ ತರಬಹುದು" ಎಂದು ಹೇಳಿದ್ದಾರೆ.