ಮುಂಬೈ , ಜೂ 30 (DaijiworldNews/MS): ಬಾಲಿವುಡ್ ನಟ ರಣ್ವೀರ್ ಸಿಂಗ್ ರವರ ವಿಚಿತ್ರ ಫ್ಯಾಶನ್ ಸೆನ್ಸ್ ಜಗಜ್ಜಾಹೀರ ವಿಚಾರ. ಒಂಥರಾ ಕ್ರೇಜಿ. ಚಿತ್ರ-ವಿಚಿತ್ರ ಉಡುಪು ತೊಡುವುದರಲ್ಲಿ ರಣ್ವೀರ್ ಸಿಂಗ್ ಸದಾ ಮುಂದು. ಈಗಾಗಲೇ ಹಲವು ಬಾರಿ ಕಣ್ಣು ಕುಕ್ಕುವ ಉಡುಪುಗಳನ್ನು ತೊಟ್ಟು ರಣ್ವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು.
ಈಗ ಮತ್ತೆ ಇಂಥದ್ದೇ ವಿಚಿತ್ರ ಉಡುಪು ತೊಟ್ಟು ಎಲ್ಲರ ಗಮನಸೆಳೆದಿದ್ದಾರೆ. ನೀವು ಎಂದಿಗೂ ನಿರೀಕ್ಷಿಸದಂತಹದನ್ನು ಈ ನಟ ಧರಿಸಬಹುದು. ಹೌದು ಈ ವಾಕ್ಯವನ್ನು ರಣವೀರ್ ಸಿಂಗ್ ಮತ್ತೆ ಸತ್ಯ ಮಾಡಿದ್ದಾರೆ! ಹಂಕ್ ಅಲೆಸ್ಸಾಂಡ್ರೊ ಮೈಕೆಲ್ ಅವರು ವಿನ್ಯಾಸಗೊಳಿಸಿರುವ ಉಡುಪು ಗಾಢ ಆಕಾಶ ನೀಲಿ ಬಣ್ಣದಿಂದ ಕೂಡಿದ್ದು ಶುದ್ಧ ರೇಷ್ಮೆಯಿಂದ ಮಾಡಲ್ಪಟ್ಟಿದೆ ಎಂದು ತೋರುತ್ತದೆ.
ಹಸಿರು ಮತ್ತು ಕೆಂಪು ಪಟ್ಟೆಗಳನ್ನು ಉಡುಪಿನ ತೋಳುಗಳಲ್ಲಿ ಕಾಣಬಹುದು. ಚಿತ್ರವೊಂದರಲ್ಲಿ, ಅವರು ಕೆಂಪು ಟೋಪಿ ಹೊಂದಿದ್ದು ಉಡುಪಿನ ಮೇಲೆ ಗುಸ್ಸಿ ಬ್ರಾಂಡ್ ನ ಕೋಟ್ ಧರಿಸಿದ್ದಾರೆ. ಈ ನೋಟವು ರಾಕ್ ಸಂಗೀತಗಾರರಾದ ಜೇರೆಡ್ ಲೆಟೊ, ಆಕ್ಸ್ಲ್ ರೋಸ್ ಮತ್ತು ಜಾರ್ಜ್ ಹ್ಯಾರಿಸನ್ರನ್ನು ತಕ್ಷಣ ನಿಮಗೆ ನೆನಪಿಸುತ್ತದೆ.