ಮುಂಬೈ, ಜೂ.25 (DaijiworldNews/HR): ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ನಟಿ ಊರ್ವಶಿ ರೌಟೇಲಾ ಅವರು 5 ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ಸೀರೆ ತೊಟ್ಟು ಇದೀಗ ಎಲ್ಲಡೆ ಸುದ್ದಿಯಾಗುತ್ತಿದ್ದಾರೆ.
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ಹೈ ಪ್ರೊಫೈಲ್ ಮದುವೆ ಸಮಾರಂಭವೊಂದಕ್ಕೆ ಬರೋಬ್ಬರಿ 4,25,000 ರೂ. ಬೆಲೆಯ ಗುಜರಾತಿ ಪಟೋಲಾ ಸೀರೆ ಧರಿಸಿ ಗಮನ ಸೆಳೆದಿದ್ದಾರೆ.
ಆ ಸೀರೆಯೊಂದಿಗೆ ಅವರು ಧರಿಸಿದ ವಜ್ರದ ಆಭರಣಗಳ ಬೆಲೆಯೂ 24,50,000 ರೂಪಾಯಿ ಎನ್ನಲಾಗಿದೆ.
ಇನ್ನು ಸೀರೆ, ಆಭರಣ, ಹೇರ್ ಸ್ಟೈಲ್, ಮೇಕಪ್, ಇತರ ಫ್ಯಾಷನ್ ಸೇರಿದಂತೆ ಆ ಮದುವೆಗೆ ಅವರು ಒಟ್ಟು 58,75,000 ರೂ. ಬೆಲೆಯ ಕಾಸ್ಟ್ಯೂಮ್ ಧರಿಸಿದ್ದರಂತೆ.
ಹಿಂದಿ ಚಿತ್ರರಂಗದ ಹಿರಿಯ ನಟ ಮತ್ತು ರಾಜಕಾರಣಿ ಮನೋಜ್ ಕುಮಾರ್ ಅವರ ಮರಿಮೊಮ್ಮಗಳ ಮದುವೆ ಇದ್ದು, ಮೆಹಂದಿ ಕಾರ್ಯಕ್ರಮಕ್ಕೆ ಈ ಸಾಂಪ್ರದಾಯಿಕ ಮತ್ತು ದುಬಾರಿ ಕಾಸ್ಟ್ಯೂಮ್ ಧರಿಸಿದ್ದ ಊರ್ವಶಿ ರೌಟೇಲಾ ಅವರ ಆ ವಿಶೇಷ ಸೀರೆಯನ್ನು ತಯಾರಿಸಲು ಸುಮಾರು 70 ದಿನಗಳು ಬೇಕಾದವು ಎಂದು ಅವರ ಸ್ಟೈಲಿಸ್ಟ್ ಹೇಳಿದ್ದಾರೆ.
ಸೀರೆ ನೇಯಲು 25 ದಿನಗಳು ಬೇಕಾಗಿದ್ದು, 600 ಗ್ರಾಂ ರೇಷ್ಮೆ ಬಳಕೆಯಾಗಿರುವ ಈ ಸೀರೆ ತಯಾರಿಕೆಗೆ 12 ಜನರು ಕೆಲಸ ಮಾಡಿದ್ದಾರೆ. ಇದಕ್ಕೆ ಬಳಕೆಯಾಗಿರುವ ವಸ್ತುಗಳಿಂದ ಸಾಮಾನ್ಯ ರೀತಿಯ ಸುಮಾರು 27 ಪಟೋಲಾ ಸೀರೆ ತಯಾರಿಸಬಹುದು ಎಂದು ಹೇಳಿದ್ದಾರೆ.