ಬೆಂಗಳೂರು, ಜೂ 16 (DaijiworldNews/PY): ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡಿ, ರಾಜ್ಯ ಭಾಷೆ ಎಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಹಲವಾರು ತುಳು ಸಂಘಟನೆಗಳು ಟ್ವಿಟ್ಟರ್ ಅಭಿಯಾನ ನಡೆಸುತ್ತಿವೆ. ಈ ಅಭಿಯಾನಕ್ಕೆ ತುಳುನಾಡಿನ ಸ್ಯಾಂಡಲ್ವುಡ್ ಕಲಾವಿದರು ಕೈಜೋಡಿಸಿದ್ದಾರೆ.
"ತುಳುವರ ನಡೆ ನುಡಿ, ಆಚರಣೆಗಳು ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯ ಭಾಗ. ತುಳುವಿಗೆ ಅಗತ್ಯ ಗೌರವಗಳು ಸಲ್ಲಬೇಕೆಂಬ ಈ ಪ್ರಯತ್ನದಲ್ಲಿ ನಾಡೆಲ್ಲಾ ಒಂದಾಗೋಣಾ. ಬಹುದಿನದ ಈ ಕೋರಿಕೆ ಇನ್ನಾದರೂ ಸ್ವೀಕೃತವಾಗಲಿ. ತುಳು ಭಾಷೆ ಅಧಿಕೃತವಾಗಲಿ. ನಮ್ಮ ದೇಶದಲ್ಲಿ ಹಲವು ಭಾಷೆ, ಸಂಸ್ಕೃತಿ ಇದೆ. ಆಗ ಆ ಭಾಷೆಗೆ ಸಿಗುವ ಘನತೆಯೇ ಬೇರೆ. ಇದಕ್ಕೆ ನನ್ನ ಬೆಂಬಲವಿದೆ. ನಾವು ಸಿನಿಮಾದ ಮೂಲಕ ಬೆಂಬಲ ನೀಡುತ್ತಾ ಬಂದಿದ್ದೇವೆ. ನಾನು ತುಳುನಾಡಿನಲ್ಲಿ ಜನಿಸಿದ ಕಾರಣ, ಕನ್ನಡದ ಒಂದು ಭಾಗವಾಗಿರುವುದರಿಂದ ತುಳು ಭಾಷೆ ಹಾಗೂ ಸಂಸ್ಕೃತಿಗೆ ಬೆಂಬಲ ಕೊಡುತ್ತೇವೆ" ಎಂದು ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದ್ದಾರೆ.
"ಐದು ದ್ರಾವಿಡ ಭಾಷೆಗಳಲ್ಲಿ ಈವರೆಗೆ ಸೂಕ್ತವಾದ ಸ್ಥಾನಮಾನ ಸಿಗದೇ ಇರುವ ಏಕೈಕ ಭಾಷೆ ಎಂದರೆ ಅದು ತುಳು. ಈ ಅಭಿಯಾನಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಗಮನಹರಿಸಬೇಕಿದೆ ಹಾಗೂ ಅಗತ್ಯವಾದ ಕ್ರಮ ಕೈಗೊಳ್ಳಬೇಕಿದೆ. ನನ್ನ ಅಭಿವ್ಯಕ್ತಿ ಮಾಧ್ಯಮ ಬೇರೆ ಇರಬಹುದು. ಆದರೆ, ನಾನೇನಾದರೂ ಸಹಾಯ ಮಾಡಬಹುದು ಎಂದಾದರೆ ಖಂಡಿತಾ ಮಾಡುತ್ತೇನೆ" ಎಂದು ನಟ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
"ಕೇರಳ ಹಾಗೂ ಕರ್ನಾಟಕದ ಗಡಿಯಲ್ಲೂ ತುಳು ಮಾತನಾಡುವವರು ಬಹಳ ಮಂದಿ ಇದ್ದಾರೆ. ನಾನು ಕಳಸದಲ್ಲಿ ಓದುವ ಸಂದರ್ಭ ನನಗೆ ಅನುಭವಕ್ಕೆ ಬಂದಿದ್ದು, ಕಳಸದಲ್ಲೂ ತುಳು ಮಾತನಾಡುವ ಮಂದಿ ಇದ್ದಾರೆ. 15ನೇ ಶತಮಾನದಲ್ಲಿ ತುಳು ಸ್ಕ್ರಿಪ್ಟ್ ಇತ್ತು ಎನ್ನುವ ವಿಚಾರ ತಿಳಿದುಬಂದಿದೆ. ತುಳು ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸುತ್ತಿವೆ. ಅಲ್ಲದೇ, ತುಳುವಿನಲ್ಲಿ ಸಾಹಿತ್ಯಕ್ಕೂ ಕೂಡಾ ಕೊಡುಗೆಯಿದೆ. ಇಷ್ಟೆಲ್ಲಾ ಇದ್ದರೂ ತುಳು ಭಾಷೆಯನ್ನು ಅಧಿಕೃತ ಮಾಡಬೇಕು. ನನ್ನ ಮಾತೃಭಾಷೆ ಕೊಂಕಣಿ. ಆದರೂ ತುಳುನಾಡಿನವಳಾಗಿ ನಾನು ಈ ಅಭಿಯಾನಕ್ಕೆ ನಾನು ಬೆಂಬಲ ನೀಡುತ್ತೇನೆ" ಎಂದು ನಟಿ ಮಾನ್ವಿತಾ ತಿಳಿಸಿದ್ದಾರೆ.
ಸಂಗೀತ ನಿರ್ದೇಶಕ ಗುರುಕಿರಣ್ ಅವರು ಕೂಡಾ ತುಳು ಅಭಿಯಾನಕ್ಕೆ ಬೆಂಬಲ ನೀಡಿದ್ದು, "ತುಳು ಭಾಷೆಗೆ ಅಧಿಕೃತ ಭಾಷೆಯ ಮಾನ್ಯತೆ ತಂದುಕೊಡಲು ನಾನು ಸುಮಾರು ಏಳು ವರ್ಷಗಳ ಹಿಂದೆ ದೆಹಲಿಗೆ ತೆರಳಿ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಈ ಬಗ್ಗೆ ಕೇವಲ ಭರವಸೆ ಮಾತ್ರವೇ ನೀಡುತ್ತಿದ್ದಾರೆ. ಈವರೆಗೆ ಭಾಷೆಗೆ ಮಾನ್ಯತೆ ತಂದಿಲ್ಲ. ಉತ್ತರಭಾರತದಲ್ಲಿ ಬೆರಣೆಳಿಕೆಯಷ್ಟು ಮಂದಿ ಮಾತನಾಡುವ ಭಾಷೆಯನ್ನು ಅಧಿಕೃತ ಭಾಷೆ ಪಟ್ಟಿಗೆ ಸೇರಿಸಿದ್ದಾರೆ. ತುಳುವನ್ನು ಏಕೆ ನಿರ್ಲಕ್ಷ್ಯ ಮಾಡಬೇಕು?" ಎಂದು ಕೇಳಿದ್ದಾರೆ.
"ನಾವು ಕೇವಲ ತುಳು ಭಾಷೆಯನ್ನು ಅಧಿಕೃತಗೊಳಿಸಿ ಎಂದು ಕೇಳುತ್ತಿದ್ದೇವೆ. ಇದು ಬಹಳ ಸಣ್ಣ ಕೆಲಸ. ಆದರೂ ಸರ್ಕಾರ ಈ ಕಾರ್ಯವನ್ನು ಮಾಡುತ್ತಿಲ್ಲ. ತುಳುನಾಡಿನಿಂದ ಇಬ್ಬರು ಮುಖ್ಯಮಂತ್ರಿಗಳಾಗಿದ್ದಾರೆ. ಆ ಪೈಕಿ ಮೊಯ್ಲಿ ಅವರು ಬರಹಗಾರರು. ಆದರೂ ಕೂಡಾ ತುಳು ಭಾಷೆಗೆ ಮಾನ್ಯತೆ ಸಿಕ್ಕಿಲ್ಲ" ಎಂದಿದ್ದಾರೆ.