ಬೆಂಗಳೂರು, ಜೂ 09 (DaijiworldNews/MS): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಾಧನೆ ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಮಂಡ್ಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಮ್ಸ್ ಸಂಸ್ಥೆಯೂ ನಿರ್ಮಾಣ ಮಾಡಲಿದೆ.
"ಭಾರತ ಸಿಂಧೂರಿ" ಎಂಬ ಶೀರ್ಷಿಕೆಯ ಚಲನಚಿತ್ರದಲ್ಲಿ ನಟಿ ಅಕ್ಷತಾ ಪಾಂಡವಪುರ ಅವರು ಐಎಎಸ್ ಅಧಿಕಾರಿ ಸಿಂಧೂರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಕೃಷ್ಣ ಸ್ವರ್ಣಸಂದ್ರ ನಿರ್ಮಾಣ ಮಾಡಿ ನಿರ್ದೇಶಿಸಲಿದ್ದಾರೆ. ಲಾಕ್ಡೌನ್ ಮುಗಿದ ನಂತರ ಚಿತ್ರೀಕರಣ ಶುರುವಾಗಲಿದೆ ಎನ್ನಲಾಗಿದೆ.
ರೋಹಿಣಿ ಸಿಂಧೂರಿ ಹುಟ್ಟಿ ಬೆಳೆದ ಆಂಧ್ರಪ್ರದೇಶ ಮತ್ತು ಕರ್ತವ್ಯ ನಿರ್ವಹಿಸಿದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆಯಲಿದೆ. 'ಭಾರತ ಸಿಂಧೂರಿ' ಹೆಸರಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ರೋಹಿಣಿ ಸಿಂಧೂರಿ ಕಾರ್ಯನಿರ್ವಹಿಸಿದ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗದಲ್ಲಿ ಚಿತ್ರೀಕರಣ ನಡೆಸಲಾಗುವುದು. ಅವರ ಸಾಧನೆಗಳನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ನಡೆದ ಐಎಎಸ್ ಅಧಿಕಾರಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರ ಜಟಾಪಟಿಗೂ ಈ ಚಲನಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸಿಂಧೂರಿ ಅವರು ಮಾಡಿದ ಸಾಧನೆಗಳ ಮೇಲೆ ಈ ಚಿತ್ರ ರೂಪುಗೊಳ್ಳುತ್ತಿದೆ. ಬಾಲ್ಯವಿವಾಹ ತಡೆ, ಹೆಣ್ಣು ಬ್ರೂಣ ಹತ್ಯೆ ತಡೆ ಹಾಗೂ ಮಂಡ್ಯವನ್ನು ಶೌಚ ಮುಕ್ತ ಜಿಲ್ಲೆ ಗೆ ಸಿಂಧೂರಿ ಅವರ ಶ್ರಮ ಇವುಗಳೇ ಚಿತ್ರದ ಹೈಲೈಟ್ಸ್ ಆಗಿದೆ ಎಂದು ಕೃಷ್ಣ ಸ್ವರ್ಣಸಂದ್ರ ಹೇಳಿದ್ದಾರೆ.