ಮುಂಬೈ, ಜೂ.03 (DaijiworldNews/HR): ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಯ್ಲಿ ತಮ್ಮ ಮಗಳು ವಮಿಕಾಲನ್ನು ಸೋಶಿಯಲ್ ಮೀಡಿಯಾದಿಂದ ದೂರ ಇರಿಸಿ ಬೆಳೆಸಬೇಕು ನಿರ್ಧಾರ ಮಾಡಿದ್ದು, ಅದೇ ಕಾರಣಕ್ಕಾಗಿ ವಮಿಕಾ ಮುಖ ಕಾಣುವಂತಹ ಒಂದೇ ಒಂದು ಫೋಟೋ ಕೂಡ ಆನ್ಲೈನ್ನಲ್ಲಿ ಲಭ್ಯವಿಲ್ಲ. ಆ ಮಗುವಿನ ಫೋಟೋ ಕ್ಲಿಕ್ಕಿಸಬೇಕು ಎಂದು ಕೆಲವು ಪಾಪರಾಜಿಗಳು ಹಠ ಹಿಡಿದಿದ್ದು, ಅಂಥವರ ಕ್ಯಾಮರಾದಿಂದ ತಮ್ಮ ಮಗಳನ್ನು ಕಾಪಾಡಬೇಕು ಎಂದು ವಿರುಷ್ಕಾ ದಂಪತಿಗಳು ಕಾಪಾಡಿಕೊಳ್ಳುತ್ತಿದ್ದು, ಈ ಜಟಾಪಟಿಯಲ್ಲಿ ಮಗುವಿಗೆ ತೊಂದರೆ ಆಗುತ್ತಿರುವ ಬಗ್ಗೆ ಈಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಭಾರತ ಕ್ರಿಕೆಟ್ ತಂಡ ವಿಮಾನ ಹತ್ತಿ ಹೋರಟಿದ್ದು, ಆಟಗಾರರ ಜೊತೆ ಅವರ ಕುಟುಂಬದವರು ಕೂಡ ಪ್ರಯಾಣ ಬೆಳೆಸಿದ್ದಾರೆ.
ಜೂ.2ರ ರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ವಿರಾಟ್ ಕೊಯ್ಲಿ ಜೊತೆ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾ ಕೂಡ ತೆರಳಿದ್ದು, ಮುಂಬೈ ಏರ್ಪೋರ್ಟ್ಗೆ ಬಂದ ಅವರ ಫೋಟೋ ತೆಗೆಯಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ.
ಇನ್ನು ಕ್ಯಾಮರಾ ಕಣ್ಣಿಗೆ ಕಾಣಬಾರದು ಎಂಬ ಉದ್ದೇಶದಿಂದ ಮಗಳ ಮುಖವನ್ನು ಸಂಪೂರ್ಣ ಮುಚ್ಚಿಕೊಂಡು ಅನುಷ್ಕಾ ಸಾಗಿದ್ದು, ಈ ಸಂದರ್ಭದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದನ್ನು ಕಂಡ ನೆಟ್ಟಿಗರು ಕೋಪಗೊಂಡಿದ್ದಾರೆ.
"ಆ ಮಗುವಿಗೆ ಸರಿಯಾಗಿ ಉಸಿರಾಡಲು ಕೂಡ ಆಗುತ್ತಿಲ್ಲ ಎನಿಸುತ್ತಿದೆ. ದಯವಿಟ್ಟು ಅವರ ಖಾಸಗಿತನಕ್ಕೆ ಧಕ್ಕೆ ತರಬೇಡಿ" ಎಂದು ಕಮೆಂಟ್ ಮಾಡುವ ಮೂಲಕ ಪಾಪರಾಜಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಗಳ ಮುಖ ತೋರಿಸಿ ಎಂದು ಕೆಲವೇ ದಿನಗಳ ಹಿಂದೆ ಅಭಿಮಾನಿಯೊಬ್ಬರು ಕೊಯ್ಲಿಗೆ ಕೇಳಿಕೊಂಡಿದ್ದು, ಅದಕ್ಕೆ ಉತ್ತರಿಸಿದ್ದ ಕೊಯ್ಲಿ "ನಮ್ಮ ಮಗಳನ್ನು ನಿಮಗೆ ತೋರಿಸಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾ ಎಂದರೆ ಏನು ಅಂತ ಆಕೆಗೆ ಅರ್ಥ ಆಗುವವರೆಗೂ ನಾವು ಅವಳನ್ನು ಅದರಲ್ಲಿ ಪರಿಚಯಿಸದಿರಲು ತೀರ್ಮಾನಿಸಿದ್ದೇನೆ" ಎಂದು ಹೇಳಿದ್ದರು.