ಚೆನ್ನೈ, ಮೇ.28 (DaijiworldNews/HR): ತಮಿಳುನಾಡಿನ ಈ ಹಿಂದಿನ ಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಮಣಿಗಂಡನ್ ಅವರು ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ 5 ವರ್ಷಗಳ ಕಾಲ ರಹಸ್ಯ ಜೀವನ ನಡೆಸಿ ನನ್ನ ಅನೇಕ ಅಶ್ಲೀಲ ಪೋಟೋ-ವಿಡಿಯೋಗಳನ್ನು ತೆಗೆದಿದ್ದು, ಈಗ ಫೋಟೋಗಳನ್ನು ಮುಂದಿಟ್ಟು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಚೆನ್ನೈ ಪೊಲೀಸ್ ಆಯುಕ್ತರಿಗೆ ತಮಿಳು ಚಿತ್ರ ನಟಿ ಶಾಂತಿನಿ ದೂರು ನೀಡಿದ್ದಾರೆ.
ನಟಿ ಶಾಂತಿನಿ ದೇವಾ ಅವರನ್ನು ಸಚಿವ ಮಣಿಗಂಡನ್ ಮದುವೆಯಾಗುವುದಾಗಿ ನಂಬಿಸಿದ್ದು, ಇಬ್ಬರೂ 5 ವರ್ಷ ಒಟ್ಟಿಗೆ ಜೀವನವನ್ನೂ ಮಾಡಿದ್ದಾರೆ. ಆರೋಪಿ ಮಣಿಗಂಡನ್ ನಟಿಗೆ ಮನೆಯನ್ನೂ ಕೊಡಿಸಿದ್ದಾರೆ. ಆದರೆ ಶಾಂತಿನಿ ಇದೀಗ ತನ್ನನ್ನು ಮದುವೆಯಾಗುವಂತೆ ಮಣಿಗಂಡನನ್ನು ಕೇಳಿಕೊಂಡಿದ್ದು, ಇದಕ್ಕೆ ಒಪ್ಪದ ಮಣಿಗಂಡನ್ ಆಕೆಯ ಅಶ್ಲೀಲ ಪೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಈ ಎಲ್ಲಾ "ಪೋಟೋಗಳನ್ನು ತಾನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವು ದಾಗಿಯೂ, ಕೊಲೆ ಮಾಡಿಸುವುದಾಗಿಯೂ ಮಾಜಿ ಸಚಿವ ಮಣಿಗಂಡನ್ ತನಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಮತ್ತು ಅವರ ಬಳಿ ಇರುವ ನನ್ನ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಬೇಕು" ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ತಮಿಳಿನಲ್ಲಿ 2009 ರಲ್ಲಿ ಬಿಡುಗಡೆಯಾಗಿ "ನಾಡೋಡಿಗಳ್" ಸಿನಿಮಾದ ಮೂಲಕ ನಟಿ ಶಾಂತಿನಿ ದೇವಾ ಭರವಸೆಗಳೊಂದಿಗೆ ಸಿನಿ ಜರ್ನಿ ಪ್ರಾರಂಭ ಮಾಡಿದ್ದರು.