ಬೆಂಗಳೂರು, ಮೇ.24 (DaijiworldNews/HR): ವಿಶ್ವ ಸುಂದರಿ 2020ರ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಕರಾವಳಿ ಬೆಡಗಿ ಆಡ್ಲಿನ್ ಕಾಸ್ಟಲಿನೋ ಅವರನ್ನು ಹೋಲುವಂತೆ ಗೊಂಬೆಯನ್ನು ನಿಗಿ ಡಾಲ್ಸ್ ಎಂಬ ಇನ್ಸ್ಟಾಗ್ರಾಂ ಪೇಜ್ ಹೊಂದಿರುವ ಶ್ರೀಲಂಕಾದ ಕಲಾವಿದ ಅಲಂಕರಿಸಿದ್ದು ಈ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿಗಿ ಡಾಲ್ಸ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಗೊಂಬೆಯ ಫೋಟೋದಲ್ಲಿ ಗುಲಾಬಿ ಬಣ್ಣದ ಸೀರೆ ಹಾಗೂ ಸಾಂಪ್ರದಾಯಿಕ ಆಭರಣಗಳಿಂದ ಗೊಂಬೆಯನ್ನ ಅಲಂಕರಿಸಿರೋದು ಕಂಡು ಬರುತ್ತಿದ್ದು, ವಿಶ್ವ ಸುಂದರಿ ಸ್ಪರ್ಧೆಯ ಸಾಂಪ್ರದಾಯಿಕ ಉಡುಪು ಸುತ್ತಿನಲ್ಲಿ ಆಡ್ಲಿನ್ ಕಾಸ್ಟಲಿನೋ ದೇಶವನ್ನ ಪ್ರತಿನಿಧಿಸಲು ಈ ರೂಪದಲ್ಲಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ.
ಇನ್ನು ವೇಷಭೂಷಣವು ಮಹಿಳೆಯ ಸೌಂದರ್ಯವನ್ನ ದುಪ್ಪಟ್ಟು ಮಾಡುತ್ತೆ. ಸೀರೆ ಒಂದು ಸಾಂಪ್ರದಾಯಿಕ ಉಡುಪಾಗಿದ್ದು ಇದು ಸಂಪೂರ್ಣ ಭಾರತೀಯರನ್ನ ಒಂದು ಮಾಡುವ ಸಾಮರ್ಥ್ಯ ಹೊಂದಿದೆ. ಭಾರತದ ರಾಷ್ಟ್ರೀಯ ಪುಷ್ಪವಾದ ಕಮಲದಿಂದ ಸ್ಪೂರ್ತಿ ಪಡೆದು ಗುಲಾಬಿ ಬಣ್ಣದ ಸೀರೆಯನ್ನ ತಯಾರಿಸಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ಇನ್ಸ್ಟಾಗ್ರಾಂ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸ್ವತಃ ಆಡ್ಲಿನ್ ಕಾಸ್ಟಲಿನೋ ಕೂಡ ಈ ಫೋಟೋವನ್ನ ತಮ್ಮ ಇನ್ಸ್ಟಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ.