ಚೆನ್ನೈ, ಮೇ.20 (DaijiworldNews/PY): ಲಾಕ್ಡೌನ್ ನಿಯಮ ಉಲ್ಲಂಘಿಸಿ ಚಿತ್ರೀಕರಣ ನಡೆಸುತ್ತಿದ್ದ ಮಲಯಾಳಂ ಬಿಗ್ಬಾಸ್ ಸೀಸನ್ 3ರ ಸೆಟ್ ಅನ್ನು ಸೀಲ್ ಮಾಡಲಾಗಿದೆ.
ಚೆಂಬರಂಬಕ್ಕಂನ ಸೆಟ್ನಲ್ಲಿ ಎಂಟು ಮಂದಿಗೆ ಕೊರೊನಾ ಪಾಸಿಟಿವ್ ಇದ್ದರೂ ಬಿಗ್ ಬಾಸ್ ಮುಂದುವರಿಸಲಾಗಿತ್ತು. ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ಮಲಯಾಳಂ ಬಿಗ್ ಬಾಸ್ ನಡೆಯುತ್ತಿತ್ತು. ತಮಿಳುನಾಡು ಸರ್ಕಾರ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ಆದರೂ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಸೀಲ್ ಮಾಡಲಾಗಿದೆ.
ನಿಯಮ ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿರುವ ಸ್ಥಳಕ್ಕೆ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಸ್ಪರ್ಧಿಗಳನ್ನು ಹೊಟೇಲ್ಗೆ ಸ್ಥಳಾಂತರಿಸಿ, ಸಿಬ್ಬಂದಿ ಸಹಿತ ಎಲ್ಲರನ್ನೂ ಖಾಲಿ ಮಾಡಿ ಸೆಟ್ ಅನ್ನು ಸೀಲ್ ಮಾಡಲಾಗಿದೆ.
ನಿಷೇಧದ ಹೊರತಾಗಿಯೂ ಕೂಡಾ ಚಿತ್ರೀಕರಣ ಮುಂದುವರಿಸಲಾಗಿತ್ತು. ಅಲ್ಲದೇ ಕೊರೊನಾ ಸೋಂಕು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಚಿತ್ರೀಕರಣವನ್ನು ನಿಷೇಧಿಸಿದ್ದ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಾವು ಸ್ಥಳವನ್ನು ಸೀಲ್ ಮಾಡಿದ್ದು, ಅಲ್ಲಿಂದ ಸ್ಪರ್ಧಿಗಳನ್ನು ಹಾಗೂ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಲಾಗಿದೆ ಎಂದು ತಿರುವಲ್ಲೂರ್ನ ರೆವೆನ್ಯೂ ವಿಭಾಗೀಯ ಅಧಿಕಾರಿ ಪ್ರೀತಿ ಪಾರ್ಕವಿ ಹೇಳಿದ್ದಾರೆ.
ಮಲಯಳಂ ಬಿಗ್ಬಾಸ್ ಆರಂಭವಾಗುವ ವೇಳೆ ಯಾವುದೇ ನಿರ್ಬಂಧವಿರಲಿಲ್ಲ. ಖ್ಯಾತ ನಟ ಮೋಹನ್ ಲಾಲ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ 14 ಸ್ಪರ್ಧಿಗಳೊಂದಿಗೆ ಪ್ರಾರಂಭವಾಗಿತ್ತು. 95 ದಿನಗಳ ಕಾಲ ಬಿಗ್ ಬಾಸ್ ಶೋ ಮುದುವರೆದಿತ್ತು. ಆದರೆ, ಈಗ ರದ್ದುಪಡಿಸಲಾಗಿದೆ.