ಮುಂಬೈ, ಮೇ.14 (DaijiworldNews/HR): ಬಹುಭಾಷಾ ನಟಿ, ಕರಾವಳಿ ಬೆಡಗಿ ಪೂಜಾ ಹೆಗ್ಡೆಗೆ ಕೊರೊನಾ ಸೋಂಕು ದೃಢಪಟ್ಟು ಕೆಲವೇ ದಿನಗಳ ಹಿಂದೆ ಗುಣಮುಖರಾಗಿದ್ದು, ತಮ್ಮ ಅಭಿಮಾನಿಗಳಿಗಾಗಿ ಆಕ್ಸಿ ಮೀಟರ್ ಉಪಯೋಗಿಸುವ ಸರಿಯಾದ ಕ್ರಮ ಯಾವುದು ಎಂಬ ಉಪಯುಕ್ತವಾದ ಮಾಹಿತಿಯನ್ನು ಪೂಜಾ ಹಂಚಿಕೊಂಡಿದ್ದಾರೆ.
ಪೂಜಾಗೆ ಏ.25ರಂದು ಕೊರೊನಾ ಸೋಂಕು ತಗುಲಿದ್ದು, 10 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇದ್ದು ಚಿಕಿತ್ಸೆ ಪಡೆದ ಬಳಿಕ ಅವರು ಗುಣಮುಖರಾದರು. ಮೇ 5ರಂದು ತಮಗೆ ನೆಗೆಟಿವ್ ವರದಿ ಬಂದಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು.
ಇನ್ನು ತಮ್ಮ ಈ ಅನುಭವದ ಆಧಾರದ ಮೇಲೆ ಅವರು ಈ ಆಕ್ಸಿ ಮೀಟರ್ ಮೂಲಕ ಪಲ್ಸ್ ರೇಟ್ ಮತ್ತು ಆಕ್ಸಿಜನ್ ಲೆವೆಲ್ ನೋಡಿಕೊಳ್ಳುವ ಸರಿಯಾದ ಕ್ರಮ ಹೇಗೆ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, "ಆಕ್ಸಿ ಮೀಟರ್ ಬಳಸುವಾಗ ಉಗುರಿಗೆ ನೇಲ್ ಪಾಲಿಶ್ ಹಚ್ಚಬಾರದು, ಕೈ ಸರಿಯಾಗಿ ತೊಳೆದುಕೊಂಡಿರಬೇಕು. ತೋರು ಬೆರಳು ಅಥವಾ ಉಂಗುರು ಬೆರಳುಗಳ ಮೂಲಕ ಮಾತ್ರ ನೋಡಿಕೊಳ್ಳಬೇಕು. ಚೆಕ್ ಮಾಡಿಕೊಳ್ಳುವುದಕ್ಕಿಂತ 5 ನಿಮಿಷ ಮುಂದೆ ವಿಶ್ರಾಂತ ಸ್ಥಿತಿಯಲ್ಲಿ ಇರಬೇಕು ಎಂಬುದನ್ನು ವಿಡಿಯೋದಲ್ಲಿ ಪೂಜಾ ವಿವರಿಸಿದ್ದಾರೆ.
ಇನ್ನು ನಾನು ಕೊರೊನಾದಿಂದಾಗಿ ಹೋಮ್ ಕ್ವಾರಂಟೈನ್ ಆಗಿದ್ದಾಗ ನನ್ನ ಆಕ್ಸಿಜನ್ ಲೆವೆಲ್ ಅನ್ನು ನೋಡಿಕೊಳ್ಳಬೇಕಿತ್ತು. ಅದನ್ನು ನೋಡಲು ಸರಿಯಾದ ಕ್ರಮ ಇದೆ ಎಂದು ವೈದ್ಯರು ಹೇಳುವವರೆಗೂ ನನಗೆ ತಿಳಿದಿರಲಿಲ್ಲ. ಈ ಮಾಹಿತಿಯಿಂದ ಸಹಾಯ ಆಗಲಿದೆ ಎಂದು ಭಾವಿಸುತ್ತೇನೆ. ಈ ರೋಗವನ್ನು ಮೆಟ್ಟಿನಿಲ್ಲುವಲ್ಲಿ ಯಾವ ಮಾಹಿತಿ ಕೂಡ ಸಣ್ಣದಲ್ಲ. ಎಲ್ಲರೂ ಮನೆಯಲ್ಲಿ ಸುರಕ್ಷಿತರಾಗಿರಿ" ಎಂದು ಬರೆದುಕೊಂಡಿದ್ದಾರೆ.