ಮುಂಬೈ, ಮೇ.13 (DaijiworldNews/HR): ಬಾಲಿವುಡ್ ನಟ ಆಮೀರ್ ಖಾನ್ಗೆ ಇಂದು ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ, ಆದರೆ ಸಿನಿಮಾ ಜರ್ನಿಯ ಆರಂಭದಲ್ಲಿ ಆಮೀರ್ ಖಾನ್ ಯಾರು ಎಂಬುದೇ ಜನರಿಗೆ ಗೊತ್ತಿರಲಿಲ್ಲ. ಮುಂಬೈನ ಬೀದಿಗಳಲ್ಲಿ ಅವರು ನಡೆದುಕೊಂಡು ಬಂದರೂ ಕೂಡ ಜನರು ಗುರುತಿಸುತ್ತಿರಲಿಲ್ಲ. ಅಂತಹ ಸಂದರ್ಭದ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ.
ಆಮೀರ್ ಖಾನ್ 1988ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಪ್ರಚಾರಕ್ಕಾಗಿ ಅವರು ಬೀದಿ ಬೀದಿಗಳಲ್ಲಿ ಸುತ್ತಾಡಿ ಪೋಸ್ಟರ್ ಅಂಟಿಸಿದ್ದರು. ಮುಂಬೈನಲ್ಲಿ ಓಡಾಡುತ್ತಿದ್ದ ಆಟೋ ಮತ್ತು ಟ್ಯಾಕ್ಸಿಗಳ ಹಿಂದೆ ಹೋಗಿ ಪೋಸ್ಟರ್ ಹಚ್ಚುತ್ತಿದ್ದರು. ಅವರಿಗೆ ಸಹ ಕಲಾವಿದರು ಸಾಥ್ ನೀಡಿದ್ದರು. ಆ ಸಮಯದಲ್ಲಿ ಇದು ಯಾವ ಸಿನಿಮಾ? ಹೀರೋ ಯಾರು? ಆಮೀರ್ ಖಾನ್ ಅಂದರೆ ಯಾರು ಎಂದು ಸ್ವತಃಅವರಲ್ಲಿಯೇ ಜನರು ಪ್ರಶ್ನೆ ಮಾಡುತ್ತಿದ್ದರಂತೆ.
ಇನ್ನು ಮೊಸಲ ಸಿನಿಮಾ ಖಯಾಮತ್ ಸೇ ಖಯಾಮತ್ ತಕ್ ನಲ್ಲಿ ಆಮೀರ್ ಖಾನ್ಗೆ ಜೋಡಿಯಾಗಿ ಜೂಹೀ ಚಾವ್ಲಾ ನಟಿಸಿದ್ದು, ಆ ಸಿನಿಮಾ ಹಿಟ್ ಆಯಿತು. ಆ ಚಿತ್ರದಲ್ಲಿ ಆಮೀರ್ ಖಾನ್ಗೆ ಸಿಕ್ಕ ಸಂಭಾವನೆ ಕೇವಲ 11 ಸಾವಿರ ರೂಪಾಯಿ. ಇಂದು ನೂರಾರು ಕೋಟಿ ಸಂಭಾವನೆ ಪಡೆಯುವ ಅವರು ಅಂದು ಕೆಲವೇ ಸಾವಿರ ರೂ.ಗಳನ್ನು ಪಡೆದು ಮನೆಗೆ ಹೋಗಿದ್ದರು.
ಸದ್ಯ ಆಮೀರ್ ಖಾನ್ ಅವರು 'ಲಾಲ್ ಸಿಂಗ್ ಚಡ್ಡಾ' ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ.