ಬೆಂಗಳೂರು, ಮೇ. 09 (DaijiworldNews/HR): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ದಿನವಿಡೀ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳು ಊಟ ಮಾಡಲು ಕೂಡ ಕಷ್ಟಪಡುತ್ತಿರುವುದ ನಟ ಶ್ರೀಮುರಳಿ ಅವರ ಗಮನಕ್ಕೆ ಬಂದಿದ್ದು, ಅಂಥವರ ನೆರವಿಗೆ ಶ್ರೀಮುರಳಿ ಧಾವಿಸಿದ್ದಾರೆ.
ಕೊರೊನಾ ವಾರಿಯರ್ಗಳ ಕಾಳಜಿ ವಹಿಸಲು ಮುಂದಾಗಿರುವ ನಟ ಶ್ರೀಮುರಳಿ ಬೆಂಗಳೂರಿನ 5 ಸರ್ಕಾರಿ ಆಸ್ಪತ್ರೆಯ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಗೆ ಊಟ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಂದಿನಿಂದ ಉಚಿತವಾಗಿ ಊಟದ ವ್ಯವಸ್ಥೆ ಮಾಡಲು ಅವರು ನಿರ್ಧರಿಸಿದ್ದು, ಕೆಸಿ ಜನರಲ್ ಆಸ್ಪತ್ರೆ, ರಾಜಾಜಿನಗರದ ಇಎಸ್ಐ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಮತ್ತು ನರ್ಸ್ಗಳಿಗೆ ಶ್ರೀಮುರಳಿ ಊಟದ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಈಗ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುತ್ತಿದ್ದು, ನಟ ಅರ್ಜುನ್ ಗೌಡ ಅವರು ಈ ಕಷ್ಟದ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಗೌಡ ಅವರು ತಮ್ಮದೇ ಹೆಲ್ಪ್ಲೈನ್ ಆರಂಭಿಸಿ, ಆ ಮೂಲಕ ಜನರ ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.