ಬೆಂಗಳೂರು, ಮೇ. 08 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರ 14 ದಿನಗಳ ಕಾಲ ಲಾಕ್ಡೌನ್ ವಿಧಿಸಿದ್ದು, ಮೇ 10ರಿಂದ ಲಾಕ್ಡೌನ್ ನಿಯಮ ಜಾರಿಗೆ ಬರಲಿದೆ. ಈ ಲಾಕ್ಡೌನ್ ಅವಧಿಯಲ್ಲಿ ಧಾರವಾಹಿ ಹಾಗು ರಿಯಾಲಿಟಿ ಶೋ ಶೂಟಿಂಗ್ ಮಾಡುವಂತಿಲ್ಲ ಎಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಸುತ್ತೋಲೆ ಹೊರಡಿಸಿರುವ ಎಸ್.ವಿ. ಶಿವಕುಮಾರ್, "ಚಿತ್ರೀಕರಣಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಒಮ್ಮತದಿಂದ ತೀರ್ಮಾನಿಸಲಾಗಿದ್ದು, ಕರ್ನಾಟಕ ಸರ್ಕಾರವು ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಯಾವುದೇ ಮೂಲೆಯಲ್ಲಿ (ರೆಸಾರ್ಟ್, ಪ್ರವಾಸಿ ತಾಣ, ಬೆಂಗಳೂರಿನ ಹೊರವಲಯಗಳಲ್ಲಿ) ಧಾರಾವಾಹಿಗಳ ಚಿತ್ರೀಕರಣ ಮಾಡಬಾರದೆಂದು ತೀರ್ಮಾನಿಸಲಾಗಿದೆ" ಎಂದರು.
"ಒಂದು ವೇಳೆ ಯಾರಾದರು ಕದ್ದು ಮುಚ್ಚಿ ಚಿತ್ರೀಕರಣ ಮಾಡಿದರೆ ಕೊರೊನಾ ನಿಯಮ ಉಲ್ಲಂಘನೆ ಅಡಿಯಲ್ಲಿ, ಆ ಧಾರಾವಾಹಿಯ ತಂಡ ಮತ್ತು ವಾಹಿನಿಗಳು ಸರ್ಕಾರದ ಕೋರೊನಾ ನಿಯಮಾವಳಿಗಳ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮೇ 24ರಂದು ಅಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ, ಚಿತ್ರೀಕರಣದ ಪುನರಾರಂಭದ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.