ಮುಂಬೈ, ಮೇ.05 (DaijiworldNews/PY): ಟ್ವಿಟ್ಟರ್ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಕಂಗನಾ ರಣಾವತ್ ಅವರ ಖಾತೆಯನ್ನು ಶಾಶ್ವತವಾಗಿ ಟ್ವಿಟ್ಟರ್ ಅಮಾನತುಗೊಳಿಸಿದೆ. ಇದೀಗ ಕೂ ಆ್ಯಪ್ ನಟಿಯನ್ನು ಸ್ವಾಗತಿಸಿದೆ.
ಕೂ ಸಹಸ್ಥಾಪಕ ಮಯಾಂಕ್ ಬಿಡಾವತ್ಕಾ ಅವರು ಕಂಗನಾ ಅವರನ್ನು ಕೂ ಗೆ ಸ್ವಾಗತಿಸಿದ್ದು, "ಕೂನಲ್ಲಿ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳಿ. ಹೆಮ್ಮೆಯಿಂದ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ" ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಕಂಗನಾ, "ತನ್ನ ಮೊದಲ ಕೂನಲ್ಲಿ ಇದು ಹೊಸ ಸ್ಥಳ ಎಂದಿದ್ದು, ಪರಿಚಯ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದರು. ಬಾಡಿಗೆ ಮನೆ ಬಾಡಿಗೆಗೆ ಇದೆ. ಆದರೆ, ಸ್ವಂತ ಮನೆ ಸ್ವಂತದ್ದಾಗಿದೆ" ಎಂದಿದ್ದರು.
ಕಂಗನಾ ಅವರು ಈ ಹಿಂದೆ ಟ್ವಿಟ್ಟರ್ ನಿಯಮ ಉಲ್ಲಂಘಿಸಿದ್ದ ಆರೋಪದ ಮೇಲೆ ಕಂಗನಾ ಅವರ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು. ಈಗ ನಿಯಮ ಉಲ್ಲಂಘನೆ ಆರೋಪದಲ್ಲಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆಯನ್ನು ಶಾಶ್ವತವಾಗಿ ಟ್ವಿಟ್ಟರ್ ಅಮಾನತುಗೊಳಿಸಿದೆ.
ಚುನಾವಣಾ ಫಲಿತಾಂಶಗಳ ಬಳಿಕ ಕಂಗನಾ ರಣಾವತ್ ಅವರು, ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಕುರಿತು ಸರಣಿ ಟ್ವೀಟ್ಗಳ ಮೂಲಕ ಕೆಲವು ವಿವಾದಾದ್ಮಕ ಹೇಳಿಕೆ ನೀಡಿದ್ದರು. ಹಾಗೆಯೇ ನಟ ಸೋನು ಸೂದ್ ವಿರುದ್ದ ಮಾಡಲಾಗಿದ್ದ ಟ್ವೀಟ್ಗೆ ಲೈಕ್ ನೀಡುವ ಮೂಲಕ ಸೋನು ಸೂದ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.