ಮುಂಬೈ, ಮೇ. 01 (DaijiworldNews/HR): ವಿವಾದದ ಮೂಲಕವೇ ಹೆಚ್ಚು ಗಮನ ಸೆಳೆಯುವ ನಟಿ ರಾಖಿ ಸಾವಂತ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಅಭಿಮಾನಿಗಳೇ ರಾಖಿಗೆ ಮಂಗಳಾರತಿ ಮಾಡಿದ್ದಾರೆ.
ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು, ಅದನ್ನು ನಿಯಂತ್ರಿಸೋಕೆ ಅನೇಕ ಕಡೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಸಾಕಷ್ಟು ನಗರಗಳಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೆ ತರಲಾಗಿದೆ. ಹೀಗಾಗಿ, ವಿನಾಕಾರಣ ಯಾರೂ ಮನೆಯಿಂದ ಹೊರಬರುವಂತಿಲ್ಲ.
ಈ ಬಗ್ಗೆ ಬೇರೆಯವರಿಗೆ ಪಾಠ ಮಾಡುವ ರಾಖಿ ಸಾವಂತ್ ಲಾಕ್ಡೌನ್ ಆದಮೇಲೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಮುಂಬೈನ ಕಾಫಿ ಶಾಪ್ ಒಂದಕ್ಕೆ ರಾಖಿ ಬಂದಿದ್ದರು. ನಂತರ ಕ್ಯಾಮೆರಾ ಕಾಣುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕೈಯಲ್ಲಿ ಸ್ಯಾನಿಟೈಸರ್ ಹಿಡಿದು ಸ್ಕೂಟರ್ ಏರಿದ್ದಾರೆ. ಸ್ಕೂಟರ್ಗೆ ಸ್ಯಾನಿಟೈಸರ್ ಹಾಕಿ, ಕೊರೊನಾ ಹೋಗು. ಇಲ್ಲದಿದ್ದರೆ ನಾನು ನಿನ್ನನ್ನು ಸುಟ್ಟು ಹಾಕಿಬಿಡುತ್ತೇನೆ" ಎಂದಿದ್ದಾರೆ.
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ರಾಖಿ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ರಾಖಿ ಯಾಕೆ ಪದೇಪದೇ ಹೊರಗೆ ಕಾಣಿಸಿಕೊಳ್ಳುತ್ತಾರೆ? ಅವರಿಗೆ ಲಾಕ್ಡೌನ್ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ, ಅವರ ವಿರುದ್ಧ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಕೂಡ ಹೇಳಿದ್ದಾರೆ.