ಮುಂಬೈ, ಏ.23 (DaijiworldNews/HR): ದೇಶದಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಉಸಿರಾಟ ಸಂಬಂಧಿ ಕಾಯಿಲೆ ಇರುವವರು ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ಬಳಲುವಂತಾಗಿದ್ದು, ಈ ಸಂದರ್ಭದಲ್ಲಿ ಸಹಾಯ ಮಾಡಲು ಬಂದ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರನ್ನು ಕೆಲವರು ಟ್ರೋಲ್ ಮಾಡಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಇಲ್ಲದಂತಾಗಿದ್ದು, ಆಕ್ಸಿಜನ್ ಸಿಲಿಂಡರ್ಗಳ ಕೊರತೆ ಉಂಟಾಗಿದೆ. ದೆಹಲಿಯ ಒಂದು ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳು ಪರದಾಡುತ್ತಿರುವುದು ನಟಿ ಸುಶ್ಮಿತಾ ಸೇನ್ ಅವರ ಗಮನಕ್ಕೆ ಬಂದ ತಕ್ಷಣ ಅವರು ಸಹಾಯ ಮಾಡಲು ಮುಂದಾಗಿದ್ದು, ಕೈಲಾದಷ್ಟು ಆಕ್ಸಿಜನ್ ಸಿಲಿಂಡರ್ಗಳನ್ನು ವ್ಯವಸ್ಥೆ ಮಾಡಿದ್ದರು. ಆದರೆ ಅವುಗಳನ್ನು ಮುಂಬೈನಿಂದ ದೆಹಲಿಗೆ ಕಳಿಸುವುದು ಹೇಗೆ ಎಂಬ ಚಿಂತೆ ಅವರಿಗೆ ಎದುರಾಗಿತ್ತು.
ಇನ್ನು ಈ ಸಮಸ್ಯೆಯನ್ನು ಸುಶ್ಮಿತಾ ಸೇನ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ಅನೇಕರಿಂದ ಹಲವು ಬಗೆಯ ಪ್ರತಿಕ್ರಿಯೆಗಳು ಬಂದಿದ್ದು, ಈ ನಡುವೆ ಅವರನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಮುಂಬೈನಲ್ಲಿಯೇ ಪರಿಸ್ಥಿತಿ ಹದಗೆಡುತ್ತಿರುವಾಗ ನೀವು ಆಕ್ಸಿಜನ್ ಸಿಲಿಂಡರ್ಗಳನ್ನು ದೆಹಲಿಗೆ ನೀಡುವ ಅವಶ್ಯಕತೆ ಏನಿದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ಆಕ್ಸಿಜನ್ ಕೊರತೆ ಎಲ್ಲ ಕಡೆಗೂ ಇದ್ದು, ಇದೇ ಸಿಲಿಂಡರ್ಗಳನ್ನು ಮುಂಬೈನ ಯಾವುದಾದರೂ ಆಸ್ಪತ್ರೆಗೆ ನೀಡಬಾರದೇಕೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದು, ಇದಕ್ಕೆ ತಿರುಗೇಟು ನೀಡಿದ ಸುಶ್ಮಿತಾ, "ಮುಂಬೈನಲ್ಲಿ ಇನ್ನೂ ಆಕ್ಸಿಜನ್ ಸಿಲಿಂಡರ್ಗಳು ಸಿಗುತ್ತಿವೆ. ಆದರೆ ದೆಹಲಿಗೆ ಇದರ ಅನಿವಾರ್ಯತೆ ಹೆಚ್ಚಿದೆ. ಅದರಲ್ಲೂ ಚಿಕ್ಕ ಆಸ್ಪತ್ರೆಗಳಿಗೆ ಹೆಚ್ಚು ಅವಶ್ಯಕತೆ ಇದ್ದು, ನಿಮ್ಮ ಕೈಯಲ್ಲಿ ಸಾಧ್ಯವಾದರೆ ಸಹಾಯ ಮಾಡಿ" ಎಂದು ಉತ್ತರಿಸಿದ್ದಾರೆ.