ಮುಂಬೈ, ಎ.21 (DaijiworldNews/PY): ಬಾಲಿವುಡ್ ನಟಿ ಕಂಗನಾ ರಣಾವತ್ ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದು, "ಮೂರನೇ ಮಗು ಹೊಂದಿದರೆ ಜೈಲಿಗೆ ಹಾಕಬೇಕು" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಜನಸಂಖ್ಯೆ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಾದ ಕಾನೂನುಗಳನ್ನು ಜಾರಿಗೆ ತರಬೇಕು. ವೋಟ್ ರಾಜಕಾರಣದಿಂದ ಬೇಸತ್ತು ಹೋಗಿದ್ದೇವೆ. ಈ ಸಮಸ್ಯೆಯ ನಿಯಂತ್ರಣಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬಲವಂತವಾಗಿ ಜನರ ಸಂತಾನಶಕ್ತಿ ಹರಣಗೊಳಿಸಲು ಮುಂದಾಗಿದ್ದರು. ಆದರೆ, ನಂತರ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಯಿತು. ಪ್ರಸ್ತುತ ಬಿಕ್ಕಟ್ಟನ್ನು ನೋಡಿದಾಗ ಕನಿಷ್ಠ ಮೂರನೇ ಮಗುವಿಗೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಬೇಕು" ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕಂಗನಾ ಪೋಷಕರು ಮೂರು ಮಕ್ಕಳನ್ನು ಹೊಂದಿದ್ದು, ಈ ನಿಯಮ ಆಕೆಯ ಪೋಷಕರಿಗೂ ಅನ್ವಯಿಸುವುದಿಲ್ಲವೇ ಎಂದು ಕಂಗನಾಗೆ ಪ್ರಶ್ನೆ ಮಾಡಿದ್ದಾರೆ.