ನವದೆಹಲಿ, ಏ. 19 (DaijiworldNews/HR): ಬಾಲಿವುಡ್ ನಟಿ ರಾಖಿ ಸಾವಂತ್ ಅವರ ತಾಯಿಯ ಶಸ್ತ್ರ ಚಿಕಿತ್ಸೆಗೆ ಹಣವಿಲ್ಲದೆ ಸಂಕಷ್ಟದಲ್ಲಿದ್ದಾಗ ಅವರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಅವರ ಸಹೋದರ ಸೋಹೆಲ್ ಖಾನ್ ನೆರವಿನ ಹಸ್ತ ಚಾಚಿದ್ದಾರೆ ಎಂದು ತಿಳಿದು ಬಂದಿದೆ.
ರಾಖಿ ಸಾವಂತ್ ಅವರ ತಾಯಿ ಜಯಾ ಅವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ರಾಖಿ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ರಾಖಿಗೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ರಾಖಿ ಪರದಾಡುತ್ತಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವು ಹಂಚಿಕೊಂಡಿದ್ದ ಅವರು, ಸಹಾಯ ಹಸ್ತದ ನೆರವು ಕೋರಿದ್ದರು.
ಇದೀಗ ರಾಖಿ ಅವರ ಕಷ್ಟಕ್ಕೆ ನಟ ಸಲ್ಮಾನ್ ಖಾನ್ ಸಹೋದರರು ಹಣ ನೀಡಿದ್ದಾರೆ. ಇವರ ನೆರವಿನಿಂದಾಗಿ ರಾಖಿ ಸಾವಂತ್ ಅವರ ತಾಯಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿದೆ ಎಂದು ತಿಳಿದು ಬಂದಿದೆ.
ತಮ್ಮ ಸಂಕಷ್ಟದ ಸಮಯಕ್ಕೆ ಸಹಕರಿಸಿದ ಸಲ್ಮಾನ್ ಖಾನ್, ಸೋಹೆಲ್ ಖಾನ್ ಹಾಗೂ ಅವರ ಕುಟುಂಬಕ್ಕೆ ರಾಖಿ ಸಾವಂತ್ ಧನ್ಯವಾದ ಹೇಳಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ರಾಖಿ ಸಾವಂತ್ ಹಂಚಿಕೊಂಡಿದ್ದಾರೆ.