ಮಂಗಳೂರು, ಮಾ. 26(DaijiworldNews/HR): ಅಕ್ಮೆ ಮೂವೀಸ್ ಇಂಟರ್ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ ತುಳು ಚಿತ್ರರಂಗದ ಬಹುನಿರೀಕ್ಷೆಯ ಕಾಮಿಡಿ ಚಿತ್ರ 'ಇಂಗ್ಲಿಷ್' -ಎಂಕ್ಲೆಗ್ ಬರ್ಪುಜಿ ಬ್ರೋ' ಮಾರ್ಚ್ 26ರಂದು ಶುಕ್ರವಾರ ಕರ್ನಾಟಕದಾದ್ಯಂತ 26 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿತು.
ಮಂಗಳೂರಿನ ಬಿಜೈಯಲ್ಲಿರುವ ಭಾರತ್ ಮಾಲ್ನ ಬಿಗ್ ಸಿನಿಮಾದಲ್ಲಿ ಶುಕ್ರವಾರ ಬೆಳಿಗ್ಗೆ 'ಇಂಗ್ಲಿಷ್' - ಎಂಕ್ಲೆಗ್ ಬರ್ಪುಜಿ ಬ್ರೋ' ಚಿತ್ರಕ್ಕೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಮೂಲಕ ತುಳು ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಏಕಕಾಲದಲ್ಲಿ 26 ಚಿತ್ರಮಂದಿರಗಳಲ್ಲಿ ಇಂಗ್ಲೀಷ್ ಚಿತ್ರ ಬಿಡುಗಡೆಗೊಂಡಿತು.
ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡಬಿದ್ರೆ, ಉಡುಪಿ, ಕುಂದಾಪುರ, ಮಣಿಪಾಲ, ಕಾರ್ಕಾಳ, ಬೆಂಗಳೂರು, ಮೈಸೂರು, ಸಕಲೇಶಪುರ, ಶುಂಠಿಕೊಪ್ಪ, ಹುಬ್ಬಳಿ, ಶಿವಮೊಗ್ಗ, ಕಾಸರಗೋಡುನ ಪ್ರತೀ ತಾಲೂಕುಗಳಲ್ಲಿರುವ ಚಿತ್ರಮಂದಿರಗಳು ಸೇರಿದಂತೆ ಒಟ್ಟು 26 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರ ತೆರೆಕಂಡಿದೆ.
ಕಾರ್ಯಕ್ರಮದಲ್ಲಿ ವಿಶೇಷ ಅಥಿತಿಗಳಾಗಿ ಭಾಗವಹಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಹಾಗೂ ಎಸಿಪಿ ಜಗದೀಶ್ ಅವರು ಚಿತ್ರಕ್ಕೆ ಶುಭಕೋರಿದರು.
ಅತಿಥಿಗಳಾಗಿ ಭಾಗವಹಿಸಿದ ಧರ್ಮಪಾಲ್ ದೇವಾಡಿಗ, ಡಾ.ದೇವರಾಜ್, ಬೋಜರಾಜ್ ವಾಮಾಂಜೂರು, ಪ್ರಥ್ವಿ ಅಂಬರ್, ವಿಸ್ಮಯ ವಿನಾಯಕ್, ನವ್ಯ ಪೂಜಾರಿ, ಮಣಿಕಾಂತ್ ಕದ್ರಿ, ವಾಲ್ಟರ್ ನಂದಳಿಕೆ, ಲಕ್ಷಣ್ ಕುಂದರ್, ಪ್ರಕಾಶ್ ಪಾಂಡೇಶ್ವರ, ಶ್ರೀನಿವಾಸ್ ಶೇರಿಗಾರ್ ಮುಂತದವರು ಮಾತನಾಡಿ, ಚಿತ್ರ ಯಶಸ್ಸು ಕಾಣಲಿ ಎಂದು ಶುಭಕೋರಿ, ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್ ಅವರ ಸಾಹಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಾಮನ್ ಮರೋಳಿ, ವೇಣಿ ಮರೋಳಿ, ಪ್ರಕಾಶ್ ಶೇರಿಗಾರ್, ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ, ಪತ್ರಕರ್ತ ಬಾಳಾ ಜಗನ್ನಾಥ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರದ ನಿರ್ಮಾಪಕರಾದ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಹರೀಶ್ ಶೇರಿಗಾರ್ ಅಥಿತಿಗಳನ್ನು ಸ್ವಾಗತಿಸಿ, ದೊಡ್ಡ ಬಜೆಟ್ ನಲ್ಲಿ ತುಳುಚಿತ್ರವನ್ನು ನಿರ್ಮಿಸಿದ್ದು, ಚಿತ್ರವನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು, ಎಲ್ಲರ ಬೆಂಬಲ, ಸಹಕಾರದಿಂದ ಚಿತ್ರ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡರೆ ಮತ್ತಷ್ಟು ತುಳು ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಹಾಗಾಗಿ ಎಲ್ಲರೂ ಚಿತ್ರಕ್ಕೆ ವ್ಯಾಪಕ ಪ್ರೋತ್ಸಾಹ ನೀಡುವ ಮೂಲಕ ಚಿತ್ರದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.