ಮಂಗಳೂರು, ಮಾ.25 (DaijiworldNews/MB) : ಒಂದು ವರ್ಷದ ಅಂತರದ ನಂತರ ಬಹುನಿರೀಕ್ಷಿತ ತುಳು ಹಾಸ್ಯ ಚಿತ್ರ 'ಇಂಗ್ಲಿಷ್' ಮಾರ್ಚ್ 26 ರಂದು ಬಿಡುಗಡೆಯಾಗಲಿದೆ.
ಕಳೆದ ವರ್ಷ ಮಾರ್ಚ್ 20 ರಂದು ಚಿತ್ರ ಬಿಡುಗಡೆಯಾಗಬೇಕಿತ್ತು, ಆದರೆ ಲಾಕ್ಡೌನ್ ಕಾರಣ ಅದನ್ನು ಮುಂದೂಡಲಾಗಿತ್ತು.
ಅಕ್ಮೆ(ಎಸಿಎಂಇ) ಮೂವೀಸ್ ಇಂಟರ್ನ್ಯಾಷನಲ್ ಲಾಂಛನದಡಿ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನೆಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಈ ಸಿನೆಮಾವನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಮತ್ತು ನವ್ಯ ಪೂಜಾರಿ ಮುಖ್ಯ ಪಾತ್ರದಲ್ಲಿದ್ದಾರೆ. ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್ ಬೋಳಾರ್, ವಿಸ್ಮಯ್ ವಿನಾಯಕ್, ದೀಪಕ್ ರೈ ನಮ್ಮನ್ನು ನಗೆ ಕಡಲಲ್ಲಿ ತೇಲಿಸಲಿದ್ದಾರೆ.
ಈ ಚಿತ್ರವು ಮಂಗಳೂರಿನ ರಾಮಕಾಂತಿ, ಪಿವಿಆರ್, ಬಿಗ್ ಸಿನೆಮಾಸ್ ಮತ್ತು ಸಿನೆಪಾಲಿಸಿಯಲ್ಲಿ ಮತ್ತು ಉಡುಪಿ, ಮಣಿಪಾಲ್, ಸುರತ್ಕಲ್, ಪುತ್ತೂರು, ಬೆಳ್ತಂಗಡಿ, ಸುಳ್ಯ, ಮೂಡುಬಿದಿರೆ, ಕಾರ್ಕಳಲಾ, ಕೊಪ್ಪ, ಸಕಲೇಶಪುರ, ಮೈಸೂರು, ಬೆಂಗಳೂರು, ಕಾಸರಗೋಡು ಮತ್ತು ಶೂಂಟಿಕೊಪ್ಪ ಬಿಡುಗಡೆಯಾಗಲಿದೆ.
ಇಂಗ್ಲಿಷ್ ಚಿತ್ರವನ್ನು ಉಡುಪಿ, ಮಂಗಳೂರು, ಬೆಂಗಳೂರು ಮತ್ತು ಮೂಡುಬಿದಿರೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಖ್ಯಾತ ನಟ ಅನಂತ್ ನಾಗ್ ಅವರು ಇಂಗ್ಲಿಷ್ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಅತಿಥಿಯಾಗಿ ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಛಾಯಾಗ್ರಹಣವನ್ನುಕೃಷ್ಣ ಸಾರಥಿ, ಅಭಿಲಾಷ್ ಕಲಾತಿ ಮಾಡಿದ್ದು ಕದ್ರಿ ಮಣಿಕಾಂತ್ ಸಂಗೀತವನ್ನು ಸಂಯೋಜಿಸಿದ್ದಾರೆ.
ಇದಕ್ಕೂ ಮೊದಲು ಸೂರಜ್ ಶೆಟ್ಟಿ ಅವರು 'ಎಕ್ಕಸಕ', 'ಪಿಲಿಬೈಲ್ ಯಮುನಕ್ಕ' ಮತ್ತು 'ಅಮ್ಮೆರ್ ಪೊಲೀಸಾ' ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹರೀಶ್ ಶೇರಿಗಾರ್ ಅವರು 'ಮಾರ್ಚ್ 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಯಾನ' ಎಂಬ ಮೂರು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದಾರೆ.
ಇಂಗ್ಲಿಷ್ನ ಮೊದಲ ಪ್ರದರ್ಶನ 'ವರ್ಲ್ಡ್ ಪ್ರೀಮಿಯರ್ ಶೋ' ದುಬೈಯಲ್ಲಿ ನಡೆದಿದೆ. ಇದು ತುಳು ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬ ಖ್ಯಾತಿಗೂ ಈ ಸಿನೆಮಾ ಪಾತ್ರವಾಗಿದೆ.