ಮಂಗಳೂರು, ಮಾ.23 (DaijiworldNews/MB) : ತುಳುನಾಡಿನ ದೈವಾರಾಧನೆ ಹಾಗೂ ತುಳು ಮಣ್ಣಿನ ಸಂಸ್ಕೃತಿಯ ಕಥೆಯಾಧಾರಿತ ತುಳು ಸಿನೆಮಾ ಪಿಂಗಾರ 2019 ನೇ ಸಾಲಿನ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ.
''ತುಳು ಚಿತ್ರರಂಗಕ್ಕೆ 50 ವರ್ಷ ತುಂಬಿದ ಈ ಸುವರ್ಣ ಸಂಭ್ರಮದಲ್ಲಿ ತುಳು ಸಿನೆಮಾಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ಸಂತಸದ ವಿಚಾರ. ತುಳು ಚಿತ್ರರಂಗಕ್ಕೆ ಈ ಪ್ರಶಸ್ತಿಯ ಅರ್ಪಣೆ ಮಾಡುತ್ತೇನೆ'' ಎಂದು ಹೇಳಿದ್ದಾರೆ ಪಿಂಗಾರ ಚಿತ್ರದ ನಿರ್ದೇಶಕ ಆರ್.ಪ್ರೀತಮ್ ಶೆಟ್ಟಿ.
ಡಿಎಂಕೆ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರಕ್ಕೆ ಮಂಗಳೂರಿನ ಅವಿನಾಶ್ ಯು. ಶೆಟ್ಟಿ ಮತ್ತು ಮಂಜುನಾಥ ರೆಡ್ಡಿ ಬಂಡವಾಳ ಹೂಡಿದ್ದಾರೆ. ಚಿತ್ರದ ತಾರಾಗಣದಲ್ಲಿ ನೀಮಾರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಗುರು ಹೆಗ್ಡೆ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ ಹಾಗೂ ಪ್ರಶಾಂತ್ ಸಿ.ಕೆ. ಕಾಣಿಸಿಕೊಂಡಿದ್ದಾರೆ. ಶಶಿರಾಜ್ ಕಾವೂರು ಸಂಭಾಷಣೆ ಬರೆದಿದ್ದು, ಅಮೃತ್ ಸೋಮೇಶ್ವರ್ ಮತ್ತು ಶಶಿರಾಜ್ ಅವರು ಸಾಹಿತ್ಯ ಬರೆದಿದ್ದಾರೆ. ಮೈಮ್ ರಾಮ್ದಾಸ್, ಶೀನ ನಾಡೋ ಸಂಗೀತ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಹಣದಲ್ಲಿ ವಿ. ಪವನ್ ಕುಮಾರ್ ಸಹಕರಿಸಿದ್ದು, ಗಣೇಶ್ ನೀರ್ಚಾಲ್ ಮತ್ತು ಶೇಷಾಚಲ ಕುಲಕರ್ಣಿ ಅವರು ಸಿನೆಮಾದ ಸಂಕಲನ ಮಾಡಿದ್ದಾರೆ.
ಇನ್ನು ಈ ಸಿನೆಮಾ ಚೆನ್ನೈನಲ್ಲಿ ನಡೆಯಲಿರುವ 2021ನೇ ಸಾಲಿನ ಇಂಡಿಯನ್ ಪನೋರಮಾ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ. ಕಳೆದ ವರ್ಷ ಈ ಸಿನೆಮಾ ಬೆಂಗಳೂರಿನಲ್ಲಿ ನಡೆದ 12ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಿಂಗಾರವು ನೆಟ್ವರ್ಕ್ ಫಾರ್ ಪ್ರಮೋಶನ್ ಆಫ್ ಏಷ್ಯನ್ ಮತ್ತು ಏಷ್ಯನ್ ಫೆಸಿಫಿಕ್ ವಿಭಾಗದಿಂದ ಬೆಸ್ಟ್ ಏಶಿಯನ್ ಚಲನಚಿತ್ರ ಎಂಬ ಬಿರುದನ್ನು ಮುಡಿಗೇರಿಸಿಕೊಂಡಿತ್ತು. ಈ ಪ್ರಶಸ್ತಿಯನ್ನು ಮೊದಲ ತುಳು ಚಿತ್ರ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.
ಇನ್ನು ಈ ಹಿಂದೆ 5 ತುಳು ಸಿನೆಮಾಗಳಿಗೆ ರಾಷ್ಟ್ರೀಯ ಪ್ರಶಸ್ತಿ ಗೌರವ ದೊರೆತಿದೆ. 1993 ರಲ್ಲಿ ತಯಾರಾದ ರಿಚರ್ಡ್ ಕ್ಯಾಸ್ಟಲಿನೋ ಅವರ 'ಬಂಗಾರ್ ಪಟ್ಲೇರ್' ಸಿನೆಮಾಕ್ಕೆ ಮೊದಲ ರಾಷ್ಟ್ರೀಯ ಪ್ರಶಸ್ತ್ರಿ ದೊರೆತಿದೆ. 2006 ರಲ್ಲಿ ಆರ್ ಧನರಾಜ್ ನಿರ್ಮಾಣ, ಆನಂದ್ ಪಿ ರಾಜು ನಿರ್ದೇಶನದ 'ಕೋಟಿ-ಚೆನ್ನಯ' ಸಿನೆಮಾಕ್ಕೆ ಎರಡನೇ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಬಳಿಕ 2008 ರಲ್ಲಿ ಗುರುದತ್ತ ಹಾಗೂ ಎಂ ದುರ್ಗಾನಂದ ನಿರ್ಮಾಣದ ಶಿವಧ್ವಜ್ ನಿರ್ದೇಶನದ 'ಗಗ್ಗರ' ಸಿನೆಮಾ ಮೂರನೇ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ. ಬಳಿಕ ಸಂದೀಪ್ ಕುಮಾರ್ ನಂದಳಿಕೆ ನಿರ್ಮಾಣದ, ಚೇತನ್ ಮುಂಡಾಡಿ ನಿರ್ದೇಶನದ 'ಮದಿಪು' ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ. ತದನಂತರ ಕಾರ್ಕಳದ ನಿತ್ಯಾನಂದ ಪೈ ನಿರ್ಮಾಣ ಹಾಗೂ ಅಭಯಸಿಂಹ ನಿರ್ದೇಶನದ 'ಪಡ್ಡಾಯಿ' ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.