ಬೆಂಗಳೂರು, ಮಾ.19 (DaijiworldNews/HR): ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಜಾಹೀರಾತುವೊಂದರಲ್ಲಿ ಉಪ್ಪಿ ಜೊತೆ ಅಭಿನಯಿಸಿದ್ದ ಹರಿಪ್ರಿಯಾ ಮೊದಲ ಬಾರಿಗೆ ಸಿನಿಮಾದಲ್ಲಿ ಅವರ ಜೊತೆಗೆ ನಟಿಸುತ್ತಿದ್ದಾರೆ.
ಈ ಸಿನಿಮಾಗೆ 'ಮೊಗ್ಗಿನ ಮನಸ್ಸು' ಖ್ಯಾತಿಯ ಶಶಾಂಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ‘ಪೆಟ್ರೋಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಹರಿಪ್ರಿಯಾ, ಏಪ್ರಿಲ್ನಲ್ಲಿ ಈ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸಿನಿಮಾದ ಕುರಿತು ಪ್ರತಿಕ್ರಿಯಿಸಿದ ಹರಿಪ್ರಿಯಾ, "ಉಪೇಂದ್ರ ಅವರೊಂದಿಗೆ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಯಾವಾಗಲೂ ಇತ್ತು. ಆ ಆಸೆ ಈ ಸಿನಿಮಾದ ಮೂಲಕ ನನಸಾಗುತ್ತಿದೆ. ಶಶಾಂಕ್ ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ವಿಶೇಷ ಮಹತ್ವ ಇರುತ್ತದೆ. ಈ ಚಿತ್ರದಲ್ಲಿಯೂ ನನ್ನ ಪಾತ್ರಕ್ಕೆ ತುಂಬ ಮಹತ್ವ ಇದೆ. ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುತ್ತೇನೆ" ಎಂದರು.
ಇನ್ನು ಹರಿಪ್ರಿಯಾ ಅಭಿನಯದ ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಬೆಲ್ ಬಾಟಂ 2’ ಸಿನಿಮಾದ ಚಿತ್ರೀಕರಣವೂ ಇನ್ನೇನು ಶುರುವಾಗಲಿದ್ದು, ಇದರ ಜೊತೆಗೆ ಇನ್ನೂ ಎರಡು ಚಿತ್ರಗಳಿಗೆ ಅವರು ಸಹಿ ಮಾಡಿದ್ದು, ಆ ಸಿನಿಮಾಗಳಲ್ಲಿಯೂ ವಿಭಿನ್ನ ಪಾತ್ರಗಳಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.