ಬೆಂಗಳೂರು, ಮಾ.13 (DaijiworldNews/HR): ನಟ ರಕ್ಷಿತ್ ಶೆಟ್ಟಿ ಅವರು ಲವ್ ಬಗ್ಗೆ ಮಾತು ಶುರುಮಾಡಿದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ, ಅಂತೆಯೇ ಇದೀಗ ರಕ್ಷಿತ್ ಒಂದು ಸೀರಿಯಸ್ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಇದು ನಟಿ ರುಕ್ಮಿಣಿ ವಸಂತ್ ಜೊತೆಗಿನ ಪ್ರೇಮ್ ಕಹಾನಿ ಎಂಬುದು ವಿಶೇಷವಾಗಿದೆ.
ಇದು ಸಿನಿಮಾ ಕಥೆಯಲ್ಲಿನ ಲವ್ ಸ್ಟೋರಿ. ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಜೊತೆಯಾಗಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದು ಒಂದು ಪೇಮಕಥೆಯ ಸಿನಿಮಾ ಆಗಿದ್ದು, ಆ ಬಗ್ಗೆ ರಕ್ಷಿತ್ ಕೆಲವು ಮಾಹಿತಿ ಬಿಟ್ಟುಕೊಟ್ಟು ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ರಕ್ಷಿತ್ ಶೆಟ್ಟಿ, "ಮೊದಲ ಬಾರಿಗೆ ನಾನು ಒಂದು ಸೀರಿಯಸ್ ಲವ್ ಸ್ಟೋರಿ ಕಥೆಯ ಸಿನಿಮಾದಲ್ಲಿ ನಟಿಸುತ್ತಿದ್ದು, ಇದಕ್ಕೆ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆ ನಾನು ಗೋಧಿಬಣ್ಣ ಸಾಧಾರಣ ಮೈಕಟ್ಟು ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಅವರು ಎಮೋಷನ್ಗಳನ್ನು ಚೆನ್ನಾಗಿ ಚಿತ್ರಿಸುತ್ತಾರೆ ಎಂಬುದು ನನಗೆ ಗೊತ್ತಿದೆ, ಆದರೆ ಅವರು ಇಂಥ ಒಂದು ಸೀರಿಯಸ್ ಲವ್ಸ್ಟೋರಿಯನ್ನು ತೆರೆ ಮೇಲೆ ಹೇಗೆ ತೋರಿಸುತ್ತಾರೆ ಎಂಬ ಕುತೂಹಲ ನನಗೆ ಇದೆ" ಎಂದಿದ್ದಾರೆ .
ಇನ್ನು ಇದೊಂದು ಬಹಳ ಅದ್ಭುತವಾದ ಕಥೆಯಾಗಿದ್ದು, ಒಬ್ಬ ನಟನಾಗಿ ನನಗೆ ಇದು ಹೆಚ್ಚು ಖುಷಿ ನೀಡಿದೆ. ಎರಡು ಶೇಡ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇಲ್ಲಿಯವರೆಗೆ ನಾನು ಇಷ್ಟು ಸೀರಿಯಸ್ ಆದ ಲವ್ಸ್ಟೋರಿಯ ಸಿನಿಮಾದಲ್ಲಿ ನಟಿಸಿರಲಿಲ್ಲ ಎಂದರು.
ಈ ಪಾತ್ರಕ್ಕಾಗಿ ರುಕ್ಮಿಣಿ ಮತ್ತು ರಕ್ಷಿತ್ ತಯಾರಿ ನಡೆಸಬೇಕಿದ್ದು, ಲವ್ ಸ್ಟೋರಿ ಸಿನಿಮಾ ಮಾಡುವಾಗ ನಟ-ನಟಿಯ ಮಧ್ಯೆ ಕೆಮಿಸ್ಟ್ರೀ ತುಂಬ ಮುಖ್ಯ ಆಗುತ್ತದೆ. ಅದಕ್ಕಾಗಿ ನಾನು ಮತ್ತು ರುಕ್ಮಿಣಿ 10 ದಿನಗಳ ಕಾಲ ವರ್ಕ್ಶಾಪ್ನಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ರಕ್ಷಿತ್ ಹೇಳಿದ್ದಾರೆ.
ಇನ್ನು ಡಿ.31ಕ್ಕೆ ‘ಸಪ್ತ ಸಾಗರದಾಚೆ ಎಲ್ಲೋ’ ತೆರೆ ಮೇಲೆ ಬರಲಿದೆ ಎನ್ನಲಾಗಿದೆ.